

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ರಾಷ್ಟ್ರೀಯ ಅಧಿವೇಶನ ‘ಅಖಿಲ ಭಾರತ ಪ್ರತಿನಿಧಿ ಸಭಾ’ (ಎಬಿಪಿಎಸ್) ಈ ಬಾರಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಪ್ರತಿ ವರ್ಷ ನಡೆಯುವ ಎಬಿಪಿಎಸ್, ಪ್ರತಿ ಮೂರು ವರ್ಷಕ್ಕೊಮ್ಮೆ ದಕ್ಷಿಣ ಭಾರತದಲ್ಲಿ ನಡೆಯುತ್ತದೆ. ಈ ಬಾರಿ ಮಾಗಡಿ ರಸ್ತೆಯ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾಕೇಂದ್ರದಲ್ಲಿ ಮಾರ್ಚ್ 15-17ರವರೆಗೆ ನಡೆಯಲಿದೆ. ಇದು ರಾಜ್ಯದಲ್ಲಿ 7ನೇ ಹಾಗೂ ಬೆಂಗಳೂರಿನಲ್ಲಿ ಐದನೇ ಅಧಿವೇಶನವಾಗಿದೆ.
1,400 ಪ್ರತಿನಿಧಿಗಳು: ಅಧಿವೇಶನದಲ್ಲಿ ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್, ವನವಾಸಿ ಕಲ್ಯಾಣ ಆಶ್ರಮ, ಎವಿವಿಪಿ, ಬಿಜೆಪಿ, ಭಾರತೀಯ ಕಿಸಾನ್ ಸಂಘ, ರಾಷ್ಟ್ರ ಸೇವಿಕಾ ಸಮಿತಿ ಮೊದಲಾದ 35ಕ್ಕೂ ಹೆಚ್ಚು ಸಂಘಟನೆಗಳ 1400 ಪ್ರತಿನಿಧಿಗಳು ಭಾಗವಹಿಸುತ್ತಾರೆ. ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ಸುರೇಶ್ ಜೋಷಿ ಸಭೆಯ ಕಲಾಪಗಳನ್ನು ನಡೆಸುತ್ತಾರೆ. ಆರೆಸ್ಸೆಸ್ ಹಾಗೂ ವಿವಿಧ ಸಂಘಟನೆಗಳ ವಾರ್ಷಿಕ ವರದಿ, ಸಂಘಟನೆಯ ವಿಸ್ತಾರ, ಹೊಸ ಆಯಾಮಗಳು, ಕಾರ್ಯಕ್ರಮಗಳು, ಮುಂದಿನ ವರ್ಷದ ಯೋಜನೆಗಳು ಚರ್ಚೆಯಾಗುತ್ತವೆ. ದೇಶದಲ್ಲಿ ನಡೆಯುತ್ತಿರುವ ಅನೇಕ ಮಹತ್ವದ ವಿಚಾರಗಳ ಕುರಿತು ಚರ್ಚೆ, ಕೆಲವು ವಿಚಾರಗಳ ಬಗ್ಗೆ ನಿರ್ಣಯವನ್ನು ಕೈಗೊಳ್ಳುವ ಸಾಧ್ಯತೆಯಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭಾಗವಹಿಸಲಿದ್ದು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾಗವಹಿಸುವ ನಿರೀಕ್ಷೆಯಿದೆ.
ಕಾರ್ಯಕರ್ತರ ಸಮಾವೇಶ
ಎಬಿಪಿಎಸ್ ಪೂರ್ವಭಾವಿಯಾಗಿ ಮಾ.8ರ ಸಂಜೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದ್ದು, ಸುಮಾರು 15 ಸಾವಿರ ಕಾರ್ಯಕರ್ತರು, ಮಹಿಳೆಯರು ಭಾಗವಹಿಸಲಿದ್ದಾರೆ. ಆರೆಸ್ಸೆಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಭಾಷಣ ಮಾಡಲಿದ್ದಾರೆ.