ಮುಂದಿನ ಪ್ರಧಾನಿ ಅಭ್ಯರ್ಥಿಗಳ ರೇಸ್​ನಲ್ಲಿ ದಲಿತರ ಹೆಸರು ಸೂಚಿಸಿ: ವಿಜಯೇಂದ್ರಗೆ CM ಸಿದ್ದರಾಮಯ್ಯ ಸವಾಲ್ ;Siddaramaiah

mysore
Published on

Siddaramaiah:ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ನಿವೃತ್ತಿಯ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿ, ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ದಲಿತ ಸಮುದಾಯಕ್ಕೆ ಸೇರಿದವರರೊಬ್ಬರನ್ನು ಹೆಸರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ(ಜುಲೈ 17) ಸವಾಲು ಹಾಕಿದರು.

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ, "ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಈಗಾಗಲೇ 75 ವರ್ಷ ವಯಸ್ಸಿನ ನರೇಂದ್ರ ಮೋದಿಯವರ ರಾಜಕೀಯ ನಿವೃತ್ತಿಯ ಸೂಚನೆ ದೇಶಕ್ಕೆ ನೀಡಿದ್ದಾರೆ. ಮುಂದಿನ ಪ್ರಧಾನಿಯಾಗಿ ದಲಿತರನ್ನು ಆಯ್ಕೆ ಮಾಡಲು ಇದು ಬಿಜೆಪಿಗೆ ಸಿಕ್ಕ ಸುವರ್ಣಾವಕಾಶ. ಆ ಉಪಕ್ರಮವು ನಿಮ್ಮಿಂದಲೇ (ಬಿಜೆಪಿ) ಆರಂಭವಾಗಲಿ. ಇತರರಿಗೆ ಉಪನ್ಯಾಸ ನೀಡುವ ಬದಲು, ನೀವು ದಲಿತ ನಾಯಕರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಏಕೆ ಪ್ರಸ್ತಾಪಿಸಬಾರದು? ಎಂದು ಪ್ರಶ್ನೆ ಮಾಡಿರುವ ಸಿಎಂ, ಗೋವಿಂದ ಕಾರಜೋಳ ಅಥವಾ ಛಲವಾದಿ ನಾರಾಯಣಸ್ವಾಮಿಯ ಹೆಸರುಗಳನ್ನು ಪ್ರಸ್ತಾಪಿಸಿದರೆ, ನಿಮ್ಮನ್ನು ಅಭಿನಂದಿಸುವ ಮೊದಲ ವ್ಯಕ್ತಿ ನಾನೇ" ಎಂದಿದ್ದಾರೆ.

ವಿಜಯೇಂದ್ರ ವಿರುದ್ಧ ಕಿಡಿ

ವಿಜಯೇಂದ್ರ ಕುರಿತು ಟ್ವೀಟ್ ನಲ್ಲಿ ಉಲ್ಲೇಖಿಸಿರುವ ಸಿಎಂ "ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ @BYVijayendra, ತಾವು ಹೊಂದಿರುವ ಕುರ್ಚಿಯ ಸ್ಥಿರತೆಯನ್ನು ಸಹ ಭದ್ರಪಡಿಸಿಕೊಳ್ಳಲು ಸಾಧ್ಯವಾಗದವರು, ನಮ್ಮ ಪ್ರಧಾನಿ ಅಭ್ಯರ್ಥಿ ಯಾರಾಗಬೇಕೆಂದು ಸಲಹೆ ನೀಡುವ ಧೈರ್ಯವನ್ನು ಹೊಂದಿದ್ದಾರೆ. ಇದು ಅವರ ಅಜ್ಞಾನ ಮತ್ತು ಆತ್ಮವಂಚನೆಯ ಪ್ರದರ್ಶನ ಮಾತ್ರವಲ್ಲ, ಅವರ ದುರಹಂಕಾರದ ಅರ್ಹತೆಯ ಪ್ರದರ್ಶನವೂ ಆಗಿದೆ" ಎಂದು ಕಿಡಿ ಕಾರಿದ್ದಾರೆ.

"ಬಿಜೆಪಿ ಯಾವಾಗಲೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರನ್ನು ಬಳಸಿಕೊಳ್ಳುತ್ತದೆ, ಆದರೆ ಅದೇ ಬಿಜೆಪಿ ಅವರನ್ನು ಈ ದೇಶದ ಪ್ರಧಾನಿಯನ್ನಾಗಿ ಏಕೆ ಬಿಂಬಿಸಿಲ್ಲ? ಎಪಿಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಬಗ್ಗೆ ಪಕ್ಷ ಹೆಮ್ಮೆಪಡುತ್ತದೆ, ಆದರೆ ಪ್ರಸ್ತುತ ಲೋಕಸಭೆಯಲ್ಲಿ ಬಿಜೆಪಿಗೆ ಒಬ್ಬ ಮುಸ್ಲಿಂ ಸಂಸದರೂ ಇಲ್ಲದಿರುವುದಕ್ಕೆ ಶ್ರೀ ವಿಜಯೇಂದ್ರ ಉತ್ತರಿಸಬಹುದೇ?" ಎಂದು ಪ್ರಶ್ನಿಸಿದ್ದಾರೆ.

ನಮ್ಮ ಪ್ರಧಾನಿ ಅಭ್ಯರ್ಥಿ ನಿರ್ಧಾರ ಮಾಡೋದು ಬಿಜೆಪಿಯಲ್ಲ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, "ಮಲ್ಲಿಕಾರ್ಜುನ ಖರ್ಗೆ ಅವರು ಕೇವಲ ಎಐಸಿಸಿ ಅಧ್ಯಕ್ಷರಲ್ಲ, ಈ ದೇಶದ ಗೌರವಾನ್ವಿತ ರಾಜಕಾರಣಿ. ದಶಕಗಳ ಸಮರ್ಪಣೆ, ಸಮಗ್ರತೆ ಮತ್ತು ಸಾರ್ವಜನಿಕ ಸೇವೆಗೆ ಬದ್ಧತೆಯ ಮೂಲಕ. ಅವರ ಪ್ರಯಾಣಕ್ಕೆ ಯಾವುದೇ ರಾಜಕೀಯ ಪ್ರೋತ್ಸಾಹದ ಅಗತ್ಯವಿರಲಿಲ್ಲ. ಮತ್ತು ನಾನು ಸ್ಪಷ್ಟವಾಗಿ ಹೇಳುತ್ತೇನೆ, ಕಾಂಗ್ರೆಸ್‌ನಲ್ಲಿ, ನಮ್ಮ ಪ್ರಧಾನಿ ಅಭ್ಯರ್ಥಿ ಯಾರಾಗಬೇಕೆಂದು ನಿರ್ಧರಿಸುವುದು ನಮ್ಮ ಪಕ್ಷವೇ ಹೊರತು ಬಿಜೆಪಿಯಲ್ಲ."ಎಂದಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net