

ಹೈದರಾಬಾದ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಜನಸಂಖ್ಯೆಯ ಹೇಳಿಕೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ನಡುವೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asadudddin Owaisi) ಮೋಹನ್ ಭಾಗವತ್ ಅವರ ಹೇಳಿಕೆಗೆ ಲೇವಡಿ ಮಾಡಿದ್ದಾರೆ.
ಮೋಹನ್ ಭಾಗವತ್ ಅವರನ್ನು ನಾನು ಕೇಳಲು ಬಯಸುತ್ತೇನೆ. ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ ಜನರಿಗೆ ಅವರು ಏನು ನೀಡುತ್ತಾರೆ? ಹೆಚ್ಚು ಮಕ್ಕಳಿಗೆ ಜನ್ಮ ನೀಡಿದವರ ಬ್ಯಾಂಕ್ ಖಾತೆಗೆ 1,500 ರೂಪಾಯಿ ನೀಡುತ್ತೀರಾ? ಇದಕ್ಕಾಗಿ ಅವರು ಯೋಜನೆಯನ್ನು ಪರಿಚಯಿಸುತ್ತಾರೆಯೇ.. ಯಾವಾಗ? ಮೋಹನ್ ಭಾಗವತ್ ಅವರು ತಮ್ಮ ಆಪ್ತರನ್ನು ಸಿಎಂ ಮಾಡಲು ಪ್ರಯತ್ನಿಸುತ್ತಿದ್ದಾರೆ, ಅವರು ಇದಕ್ಕಾಗಿ ಒಂದು ಯೋಜನೆಯನ್ನು ಪರಿಚಯಿಸಬಹುದು ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರತಿ ಸಮುದಾಯದ ಟಿಎಫ್ಆರ್ ದರ ಕುಸಿದಿದೆ ಎಂದ ಓವೈಸಿ ಹೇಳಿದ್ದಾರೆ. ಭಾರತದ ಒಟ್ಟು ಫಲವತ್ತತೆ ದರ (TFR) ಪ್ರಸ್ತುತ 2.1 ರ ಬದಲಿಗೆ ಕನಿಷ್ಠ 3 ಆಗಿರಬೇಕು ಎಂದು ಅವರು ಹೇಳಿದರು. ಧರ್ಮದ ಪ್ರಕಾರ, ಟಿಎಫ್ಆರ್ ದರವು ಮುಸ್ಲಿಮರಿಗೆ ಹೆಚ್ಚು ಕುಸಿದಿದೆ. ನನಗೆ 6 ಮಕ್ಕಳಿದ್ದಾರೆ, ನಾನು ಇದನ್ನು ಈಗಾಗಲೇ ನಿಮಗೆ ಹೇಳಿದ್ದೇನೆ. ನರೇಂದ್ರ ಮೋದಿಗೆ 6 ಜನ ಸಹೋದರರಿದ್ದು, ಅಮಿತ್ ಷಾ ಅವರಿಗೂ 6 ಜನ ಸಹೋದರರಿದ್ದಾರೆ ಎಂದು ಓವೈಸಿ ತಿಳಿಸಿದರು. TFR ಮಹಿಳೆಯು ಜನ್ಮ ನೀಡುವ ಮಕ್ಕಳ ಸರಾಸರಿ ಸಂಖ್ಯೆಯನ್ನು ಸೂಚಿಸುತ್ತದೆ.
ಸಮಾಜವನ್ನು ಉಳಿಸಬೇಕಾದರೆ ಹಿಂದು ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದ ಬೇಕೆಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ನಾಗುರದಲ್ಲಿ ನಡೆದ ‘ಕಥಾಳೆ ಕುಲ್ ಸಮ್ಮೇಳನ್’ದಲ್ಲಿ ಮಾತನಾಡಿದ ಭಾಗವತ್, ಜನಸಂಖ್ಯೆ ದರ 2.1ಕ್ಕಿಂತ ಕೆಳಗೆ ಕುಸಿದರೆ ಸಮಾಜ ನಾಶವಾಗುತ್ತದೆ. ಹಾಗಾಗಿ ಅದು ಕನಿಷ್ಠ ಮೂರು ಆಗಬೇಕು ಎಂದು ಪ್ರತಿಪಾದಿಸಿದ್ದಾರೆ. ತಮ್ಮ ಹೇಳಿಕೆಗೆ ಪೂರಕವಾಗಿ ಅವರು ಜನಸಂಖ್ಯೆ ಅಧ್ಯಯನ ವರದಿಯನ್ನು ಉಲ್ಲೇಖಿಸಿದರು. ಒಂದು ಸಮುದಾಯದ ಜನಸಂಖ್ಯೆಯು 2.1ರ ಫಲವಂತಿ ಕೆಗಿಂತ ಕೆಳಗಿದ್ದರೆ ಆ ಸಮಾಜ ವಿನಾಶವಾಗುತ್ತದೆ ಎಂದು ಜನಸಂಖ್ಯಾ ಅಧ್ಯಯನ ಹೇಳುತ್ತದೆ ಎಂದು ವಿವರಿಸಿದ್ಧಾರೆ.
ನಮ್ಮ ದೇಶದ ಜನಸಂಖ್ಯಾ ನೀತಿಯನ್ನು 1998 ಅಥವಾ 2002ರಲ್ಲಿ ರೂಪಿಸಲಾಗಿದೆ. ಯಾವುದೇ ಸಮುದಾಯದ ಜನಸಂಖ್ಯೆಯು 2.1 ಕ್ಕಿಂತ ಕಡಿಮೆಯಾಗಬಾರದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಜನಸಂಖ್ಯಾ ವಿಜ್ಞಾನದ ಪ್ರಕಾರ ಒಂದು ಕುಟುಂಬವು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂದು ಆರ್‌ಎಸ್‌ಎಸ್ (RSS) ಮೋಹನ್ ಭಾಗವತ್ (Mohan Bhagwat) ಹೇಳಿದ್ಧಾರೆ.(ಏಜೆನ್ಸೀಸ್)