ಆರ್‌ಎಸ್‌ಎಸ್ ಮಧ್ಯಸ್ಥಿಕೆ ಸಭೆಯ ಬಳಿಕ ಬಿಜೆಪಿಯಲ್ಲಿ ಒಂದಿಷ್ಟು ಬದಲಾವಣೆಯ ಗಾಳಿ

New Bjp New
Published on

ಬೆಂಗಳೂರು:
ಆರ್‌ಎಸ್‌ಎಸ್ ಸಭೆಯ ಬಳಿಕ ಬಿಜೆಪಿಯಲ್ಲಿ ಸಮನ್ವತೆ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಬದಲಾಗುತ್ತಿರುವ ಕಾಲಘಟ್ಟಕ್ಕೆ ಹೊಂದಿಕೊಳ್ಳಲು ಹಿರಿಯ ನಾಯಕರು ಒಲ್ಲದ ಮನಸ್ಸಿನಲ್ಲಿ ಮುಂದಾಗಿದಾರೆ.
ಸದಾ ದೂರು ಹೆಳಿಕೊಂಡು ಕುಳಿತರೆ ಸಂಘಟನೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಮ್ಮಅಸ್ಥಿತ್ವವನ್ನು ಉಳಿಸಿಕೊಂಡು ಪಕ್ಷಕ್ಕೆ ಧಕ್ಕೆಯಾಗದ ರೀತಿಯಲ್ಲಿ ತಮ್ಮ ರೀತಿ ನೀತಿಗಳನ್ನು ಬದಲಿಸಿಕೊಳ್ಳಲು ಪ್ರಮುಖರು ಒಲವು ತೋರಿಸಿದ್ದಾರೆ ಅಷ್ಟೇ ಅಲ್ಲ, ಈಗ ಪೋನ್ ಸಂಪರ್ಕ ಮೂಲಕ ಮಾತುಕತೆಗಳು ನಡೆಯುತ್ತಿವೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ನಡುವೆ ಮಾತುಕತೆಯ ಪರಿಣಾಮವಾಗಿ ಸಮನ್ವಯತೆ ಸಾಧ್ಯವಾಗಿದೆ. ಇನ್ನು ಪಕ್ಷದ ಹಿರಿಯ ಮುಖಂಡರನ್ನು ಪರಸ್ಪರ ಭೇಟಿ ಮಾಡಿ ಚರ್ಚೆ ಮಾಡಿ ಕಾರ್ಯಕ್ರಮ ರೂಪಿಸಲು ಮತ್ತು ಹೋರಾಟ ಮಾಡಲು ವೇದಿಕೆ ಸಜ್ಜುಗೊಳಿಸಿಕೊಳ್ಳಲು ನಿರ್ಧರಿಸಿರುವುದು ಸದ್ಯಕ್ಕೆ ಹೊಸ ಬೆಳವಣಿಗೆ. ಆರ್‌ಎಸ್‌ಎಸ್ ಮಧ್ಯಸ್ಥಿಕೆಯಿಂದ ಹಿರಿಯರ ನಡುವೆ ಮಡುಗಟ್ಟಿದ್ದ ವೈಮನಸ್ಸುಗಳು ಸ್ವಲ್ಪ ಮಟ್ಟಿಗೆ ದೂರವಾಗುವ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಪಕ್ಷದಲ್ಲಿ ಬದಲಾವಣೆಯ ದಾಳಿ ಬೀಸುತ್ತಿದ್ದು, ಎಲ್ಲರೂ ಸ್ವಲ್ಪ ನಿರಾಳವಾಗುವಂತ ಸ್ಥಿತಿ ಬಂದಿದೆ ಎನ್ನುವುದು ಹಲವರ ಅಭಿಮತ.
ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ಅವರು ಅಧಿಕಾರ ಸ್ವೀಕಾರ ಮಾಡಿದ ಮೇಲೆ ಯುವ ಮುಖಂಡರು, ಪ್ರಮುಖರು ಜೋಶ್‌ನಲ್ಲಿ ಕೆಲಸ ಮಾಡಲು ಮುಂದಾಗಿದ್ದರು. ಆದರೆ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕೆಲ ಹಿರಿಯ ನಾಯಕರು ಮಾತ್ರ ಇದಕ್ಕೆ ಸುತರಾಂ ಒಪ್ಪಿರಲಿಲ್ಲ. ಇನ್ನು ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರ ವಿರುದ್ದವೇ ಅಡ್ಜೆಸ್ಟ್‌ಮೆಂಟ್ ರಾಜಕಾರಣದವರು ನೀವು ಎಂದು ಯತ್ನಾಳ್ ತಿರುಗಿ ಬಿದ್ದಿದ್ದರು. ಪಾದಯಾತ್ರೆ ಬಳಿಕ ಹಿರಿಯ ಮುಖಂಡರ ಮುನಿಸಿ ದೆಹಲಿ ನಾಯಕರ ಅಂಗಳವನ್ನು ತಲುಪಿತ್ತು.
ಇನ್ನು ಮುಂದೆ ಹಿರಿಯ ನಾಯಕರನ್ನೆಲ್ಲ ವಿಶ್ವಾಸಕ್ಕೆ ಪಡೆದು ಪಕ್ಷ ಸಂಘಟನೆ ಮಾಡಲು ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net