ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರೆಸ್ಸೆಸ್) ರಾಷ್ಟ್ರೀಯ ಅಧಿವೇಶನವಾದ ‘ಅಖಿಲ ಭಾರತ ಪ್ರತಿನಿಧಿ ಸಭಾ(ಎಬಿಪಿಎಸ್)’ ಈ ಬಾರಿಯೂ ಬೆಂಗಳೂರಿನಲ್ಲಿ ಮಾರ್ಚ್ 19-20ಕ್ಕೆ ನಡೆಯಲಿದೆ.
ಕಳೆದ ವರ್ಷವೂ ಬೆಂಗಳೂರಿನಲ್ಲಿ ಸಭೆ ಆಯೋಜನೆಯಾಗಿತ್ತಾದರೂ ಕರೊನಾ ಸೋಂಕು ಏರಿಕೆಯ ಹಂತದಲ್ಲಿದ್ದದ್ದರಿಂದ ರದ್ದುಪಡಿಸಲಾಗಿತ್ತು. ಈ ಬಾರಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಬೇಕಿದ್ದ ಸಭೆಯನ್ನು ಬೆಂಗಳೂರಿನಲ್ಲೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಂದು ಕರ್ನಾಟಕ ದಕ್ಷಿಣ ಆರೆಸ್ಸೆಸ್ ಮಾಧ್ಯಮ ವಿಭಾಗ ಮುಖ್ಯಸ್ಥ ಇ. ಎಸ್. ಪ್ರದೀಪ್ ಹೇಳಿದ್ದಾರೆ.
ಆರೆಸ್ಸೆಸ್ಸಿನ ಪ್ರಮುಖ ನೀತಿ ನಿರ್ಣಯಗಳನ್ನು ಕೈಗೊಳ್ಳುವ ಈ ವಾರ್ಷಿಕ ಸಭೆಯನ್ನು ಒಮ್ಮೆ ದಕ್ಷಿಣ ಭಾರತ, ಮತ್ತೊಮ್ಮೆ ಉತ್ತರ ಭಾರತ ಹಾಗೂ ಮೂರನೇ ವರ್ಷದಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆಸಲಾಗುತ್ತದೆ. ಆದರೆ ಈ ಬಾರಿ ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಪ್ರತಿದಿನ ಸುಮಾರು ಮೂರುಸಾವಿರ ಆಸುಪಾಸಿನಲ್ಲಿ ಹೊಸ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಮಹಾರಾಷ್ಟ್ರದ ಹೋಲಿಕೆಯಲ್ಲಿ ಕರ್ನಾಟಕದಲ್ಲಿ ಸೋಂಕು ಸಾಕಷ್ಟು ನಿಯಂತ್ರಣದಲ್ಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರನ್ನೆ ಮತ್ತೆ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ
ಮಹಾರಾಷ್ಟ್ರದಲ್ಲಿ ಕರೊನಾ
ಪ್ರತಿ ಮೂರು ವರ್ಷಕ್ಕೊಮ್ಮೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯುವ ಅಧಿವೇಶನದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸರಕಾರ್ಯವಾಹ) ಹುದ್ದೆಗೆ ಚುನಾವಣೆ ನಡೆಯುತ್ತದೆ. ಸದ್ಯ ಸರಕಾರ್ಯವಾಹರಾಗಿ ಸುರೇಶ್ (ಭಯ್ಯಜಿ) ಜೋಷಿ ಇದ್ದಾರೆ. ಈ ಬಾರಿ ಬೆಂಗಳೂರಿನ ಅಧಿವೇಶನದಲ್ಲೆ ಚುನಾವಣೆ ನಡೆಯಲಿದೆ. ಇತ್ತೀಚಿನ ವರ್ಷಗಳಲ್ಲಿ ನಾಗಪುರದಿಂದ ಹೊರಗೆ ಚುನಾವಣೆ ನಡೆಯುತ್ತಿರುವುದು ಬಹುಶಃ ಇದೇ ಮೊದಲು ಎನ್ನಲಾಗಿದೆ. ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲೆ ಈ ಬಾರಿಯೂ ಅಧಿವೇಶನ ನಡೆಯಲಿದೆ. ಪ್ರತಿವರ್ಷ ಮೂರು ದಿನ ನಡೆಯುವ ಅಧಿವೇಶನವನ್ನು ಈ ಬಾರಿ ಎರಡು ದಿನಕ್ಕೆ ಮಿತಿಗೊಳಿಸಲಾಗಿದೆ. ಸಾಮಾನ್ಯವಾಗಿ 1,400 ಪ್ರತಿನಿಧಿಗಳು ದೇಶದ ವಿವಿಧ ಭಾಗಗಳಿಂದ ಆಗಮಿಸುತ್ತಾರೆ. ಆದರೆ ಈ ಬಾರಿ ಇನ್ನೂ ಕೆಲ ಪ್ರದೇಶಗಳಲ್ಲಿ ಕರೊನಾ ಸೋಂಕು ಇರುವುದರಿಂದ ಎಷ್ಟು ಜನರನ್ನು ಆಹ್ವಾನಿಸಬೇಕು ಎಂಬುದು ಸೇರಿ ಅನೇಕ ವಿಚಾರಗಳಲ್ಲಿ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮೊದಲ ಬಾರಿಗೆ ಚುನಾವಣೆ
2020ರಲ್ಲಿ ಅಧಿವೇಶನ ರದ್ದಾದ ನಂತರ ಪತ್ರಿಕಾ ಹೇಳಿಕೆ ನೀಡಿದ್ದ ಸರಕಾರ್ಯವಾಹ ಸುರೇಶ್ ಜೋಶಿ, ಕೋವಿಡ್-19 ಗಂಭೀರತೆಯನ್ನು ಪರಿಗಣಿಸಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ದೇಶನದ ಅನುಸಾರ, ಬೆಂಗಳೂರಿನಲ್ಲಿ ನಡೆಯಬೇಕಿದ್ದ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನು ರದ್ದುಗೊಳಿಸಲಾಗಿದೆ. ಆರೆಸ್ಸೆಸ್ ಸ್ವಯಂಸೇವಕರು ಸರ್ಕಾರಗಳ ಜತೆ ಕೈಜೋಡಿಸಿ ಸಮಾಜದದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಈ ಮೂಲಕ ಕೇಳಿಕೊಳ್ಳಲಾಗಿದೆ ಎಂದಿದ್ದರು. ಅದರಂತೆ ದೇಶಾದ್ಯಂತ ಲಕ್ಷಾಂತರ ಸ್ವಯಂಸೇವಕರು ಕರೊನಾ ಸೋಂಕಿತರು, ಬಾಧಿತರಿಗೆ ಆರೋಗ್ಯ, ಆಹಾರ ಸೇವೆಗಳನ್ನು ಕಲ್ಪಿಸಿದ್ದರು.
ಸೇವೆಯಲ್ಲಿ ತೊಡಗಲು ಸೂಚನೆ