ರೂ. 17ರಿಂದ 1400ಕ್ಕೆ ಏರಿಕೆ; ಈಗ ಮತ್ತೆ 15 ದಿನದಲ್ಲಿ 83% ಹೆಚ್ಚಳ: ಹೂಡಿಕೆದಾರರನ್ನು ಶ್ರೀಮಂತಗೊಳಿಸಿದ 27 ವರ್ಷದ ಐಟಿ ಕಂಪನಿ ಷೇರು

dynacons-1
Published on

ಮುಂಬೈ: 27 ವರ್ಷದ ಐಟಿ ಕಂಪನಿ ಡೈನಾಕಾನ್ಸ್ ಸಿಸ್ಟಮ್ಸ್ & ಸೊಲ್ಯೂಷನ್ಸ್​ ಲಿಮಿಟೆಡ್​ (Dynacons Systems & Solutions Dynacons Systems and Solutions Ltd.) ಷೇರುಗಳ ಬೆಲೆ ಇತ್ತೀಚಿನ ದಿನಗಳಲ್ಲಿ ಏರಿಕೆ ಕಾಣುತ್ತಿದೆ. ಕಂಪನಿಯ ಷೇರುಗಳು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ.

ಮಾರ್ಚ್ 27 ಮತ್ತು ಏಪ್ರಿಲ್ 19 ರ ನಡುವೆ ಕಂಪನಿಯ ಷೇರುಗಳ ಬೆಲೆ 782.40 ರೂ.ನಿಂದ 1435.70 ರೂಪಾಯಿಗೆ ಏರಿಕೆಯಾಯಿತು. ಅಂದರೆ, ಕೇವಲ 15 ವಹಿವಾಟು ಅವಧಿಗಳಲ್ಲಿ, ಶೇಕಡಾ 83.50 ರಷ್ಟು ಹೆಚ್ಚಳವಾಗುವಲ್ಲಿ ಯಶಸ್ವಿಯಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್‌ನ ಬೆಲೆ 340 ಪ್ರತಿಶತದಷ್ಟು ಹೆಚ್ಚಾಗಿದೆ.

ಆದರೆ, ಸೋಮವಾರದ ವಹಿವಾಟಿನಲ್ಲಿ ಕಂಪನಿಯ ಷೇರುಗಳ ಬೆಲೆ ಲಾಭದ ಬುಕಿಂಗ್‌ನಿಂದಾಗಿ ಕುಸಿಯಿತು. ಅಂದರೆ, ಲಾಭಕ್ಕಾಗಿ ಮಾರಾಟ ಮಾಡಿದ್ದರಿಂದ ಷೇರುಗಳ ಬೆಲೆ ಇಳಿಕೆಯಾಯಿತು. ಸೋಮವಾರ ಈ ಷೇರುಗಳ ಬೆಲೆ ಶೇ. 5.14ರಷ್ಟು ಕುಸಿದು 1366.90 ರೂಪಾಯಿ ತಲುಪಿತು. ಸೋಮವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಈ ಷೇರುಗಳ ಬೆಲೆ 1,467 ರೂ. ತಲುಪಿತ್ತು. ಈ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆ 1,468.80 ಇದೆ.

ಈ ಕಂಪನಿಯ ಷೇರುಗಳ ಬೆಲೆ ಏಪ್ರಿಲ್ 2020ರಲ್ಲಿ 17.75 ರೂ. ಇತ್ತು. ಅಲ್ಲಿಂದ ಇದುವರೆಗೆ ಈ ಕಂಪನಿಯ ಷೇರುಗಳ ಬೆಲೆ 7657 ಪ್ರತಿಶತದಷ್ಟು ಏರಿಕೆ ಕಂಡಿವೆ.

ಬ್ಯಾಂಕಿಂಗ್ ಪರಿಹಾರಗಳಿಗೆ ಸಂಬಂಧಿಸಿದ ಕೆಲಸಕ್ಕಾಗಿ ನಬಾರ್ಡ್ 233 ಕೋಟಿ ರೂಪಾಯಿಗಳ ವರ್ಕ್ ಆರ್ಡರ್ ನೀಡಿದೆ ಎಂದು ಏಪ್ರಿಲ್ 16 ರಂದು, ಡೈನಾಕಾನ್ಸ್ ಸಿಸ್ಟಮ್ಸ್ & ಸೊಲ್ಯೂಷನ್ಸ್ ಸ್ಟಾಕ್ ಮಾರುಕಟ್ಟೆಗಳಿಗೆ ತಿಳಿಸಿತ್ತು. ಇದಕ್ಕೂ ಮೊದಲು ಮಾರ್ಚ್‌ನಲ್ಲಿ ಎನ್‌ಪಿಸಿಐ 41.72 ಕೋಟಿ ರೂಪಾಯಿಗಳ ಕಾಮಗಾರಿ ಗುತ್ತಿಗೆಯನ್ನು ಈ ಕಂಪನಿಗೆ ನೀಡಿದೆ.

ಕಂಪನಿಯು ಫೆಬ್ರವರಿಯಲ್ಲಿ ಬಿಎಸ್‌ಎನ್‌ಎಲ್‌ನಿಂದ 90.02 ಕೋಟಿ ರೂಪಾಯಿ ಮೌಲ್ಯದ ವರ್ಕ್​ ಆರ್ಡರ್​ ಪಡೆದಿತ್ತು. ಇದಲ್ಲದೆ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಭಾರತ್ ಹೆವಿ ಎಲೆಕ್ಟ್ರಿಕಲ್ಸ್​ನಿಂದ ಕ್ರಮವಾಗಿ 214 ಕೋಟಿ ಹಾಗೂ 137 ಕೋಟಿ ರೂ.ಗಳ ಕಾಮಗಾರಿ ಆದೇಶ ಸ್ವೀಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net