3 ನಿಮಿಷಕ್ಕೆ 500 ರೂಪಾಯಿ... ಕಷ್ಟ-ಸುಖ ಹೇಳಿಕೊಳ್ಳಲು ಈ ಕೆಫೆಯಲ್ಲಿ ಸಿಗುತ್ತೆ ಲವ್​ ಪ್ಯಾಕೇಜ್​! Waitress

Waitress
Published on

Waitress : ಪ್ರಸ್ತುತ ಆಧುನಿಕ ಕಾಲದಲ್ಲಿ ಮನುಷ್ಯ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂಟಿತನವು ಕೂಡ ಒಂದು. ನಿಮ್ಮ ನೋವುಗಳನ್ನು ಹಂಚಿಕೊಳ್ಳಲು ಯಾರನ್ನಾದರೂ ಹುಡುಕುವುದು ತುಂಬಾನೇ ಕಷ್ಟ. ಇನ್ನೊಬ್ಬರ ಚಿಂತೆ ನಮಗ್ಯಾಕೆ ಎನ್ನುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಕಷ್ಟ-ಸುಖ ಕೇಳಲು ಕೂಡ ಇಂದಿನ ಪೀಳಿಗೆಯವರಲ್ಲಿ ಸಮಯವಿಲ್ಲ.

ಇದೇ ಸಮಸ್ಯೆಯನ್ನು ಬಂಡವಾಳ ಮಾಡಿಕೊಂಡಿರುವ ಕೆಫೆಯೊಂದು ಹೊಸ ಟ್ರೆಂಡ್​ ಅನ್ನು ಪರಿಚಯಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದೀಗ ಚರ್ಚೆಯ ವಿಷಯವಾಗಿದೆ.

ಈ ಕೆಫೆಯು ಜಪಾನ್‌ ರಾಜಧಾನಿ ಟೋಕಿಯೊದಲ್ಲಿದೆ. ಕೇವಲ ಊಟ ಮಾತ್ರವಲ್ಲ, ನಿಮ್ಮ ಸಮಸ್ಯೆಗಳನ್ನು ಕೇಳಲು ಪರಿಚಾರಿಕೆಯನ್ನು ಸಹ ಈ ಕೆಫೆ ನೀಡುತ್ತದೆ. ಮನಸಾರೆ ಮಾತನಾಡಲು ಮತ್ತು ಅಪ್ಪಿಕೊಳ್ಳಲು ಅವಕಾಶವಿದೆ. ಇದನ್ನು 'ಲವ್ ಪ್ಯಾಕೇಜ್' ಎಂದು ಕರೆಯಲಾಗುತ್ತದೆ. ಈ ಪ್ಯಾಕೇಜ್​ ಅನ್ನು ಸೋನೆಯಾ ಹೆಸರಿನ ಕೆಫೆ ನೀಡುತ್ತಿದೆ.

ಪರಿಚಾರಿಕೆಗಳು ತಮ್ಮ ಕೆಫೆಗೆ ಬರುವ ಗ್ರಾಹಕರನ್ನು ತಬ್ಬಿಕೊಳ್ಳಲು ಮತ್ತು ಸಾಂತ್ವನ ಹೇಳಲು ಸಹಾಯ ಮಾಡುತ್ತಾರೆ. ಆದರೆ, ಇದ್ಯಾವುದು ಉಚಿತವಲ್ಲ ಎಂಬುದು ನಿಮಗೆ ತಿಳಿದಿರಲಿ. ಇದಕ್ಕಾಗಿ ಕೆಫೆಯು ಹಣವನ್ನು ಸಹ ವಿಧಿಸುತ್ತದೆ.

ಜಪಾನ್ ಟುಡೇ ವರದಿ ಪ್ರಕಾರ, ಪರಿಚಾರಿಕೆ ಮಡಿಲಲ್ಲಿ 20 ನಿಮಿಷಗಳ ಕಾಲ ಮಲಗಲು 1,700 ರೂಪಾಯಿ ವೆಚ್ಚವಾಗುತ್ತದೆ. 10 ಗಂಟೆಗಳ ರಾತ್ರಿ ವಾಸ್ತವ್ಯಕ್ಕೆ 27,000 ರೂಪಾಯಿ ವೆಚ್ಚವಾಗುತ್ತದೆ. ಪರಿಚಾರಿಕೆ ಮಡಿಲಲ್ಲಿ ಮೂರು ನಿಮಿಷಗಳ ಕಾಲ ಮಲಗಲು 500 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

ವಿಭಿನ್ನ ಸಮಯಗಳಿಗೆ ವಿಭಿನ್ನ ದರಗಳಿವೆ. ಈ ಸೇವೆಗೆ ಕೆಲವು ಮಿತಿಗಳಿವೆ. ಪರಿಚಾರಿಕೆ ಕೂದಲನ್ನು ಮುಟ್ಟಲು ಅಥವಾ ಅಸಭ್ಯವಾಗಿ ವರ್ತಿಸಲು ಅವಕಾಶವಿಲ್ಲ. ಒಂಟಿತನ ಅನುಭವಿಸುವವರಿಗೆ ಸಾಂತ್ವನ ನೀಡುವುದು ಕೆಫೆಯ ಏಕೈಕ ಗುರಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net