

ಶಿವಮೊಗ್ಗ: ಶಿವಮೊಗ್ಗದ ಶ್ರೀ ಕನಕ ಸಮುದಾಯ ಭವನಕ್ಕೆ ಸಂಸದರ ನಿಧಿಯಿಂದ 50 ಲಕ್ಷ ರೂ. ನೀಡುವುದಾಗಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.
ನಗರದ ಬಾಲರಾಜ್ ಅರಸ್ ರಸ್ತೆಯ ಕುರುಬರ ಹಾಸ್ಟೆಲ್ ಜಾಗದಲ್ಲಿ ಶನಿವಾರ ಶ್ರೀ ಕನಕ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಐದು ಕೋಟಿ ರೂ. ಅನುದಾನ ಮಂಜೂರು ಆಗಿತ್ತು. ಆದರೆ ಕಾರಣಾಂತರಗಳಿಂದ ಅದು ಬಿಡುಗಡೆ ಆಗಲಿಲ್ಲ. ಅದಕ್ಕೆ ಸಮಾಜದ ಕ್ಷಮೆಯಾಚಿಸಿದರು.
ಮುಂದಿನ ವರ್ಷ ಇದೇ ಸಮಯಕ್ಕೆ ಭವನ ಪೂರ್ಣಗೊಂಡು ಸಚಿವ ಸುರೇಶ್ ನೇತೃತ್ವದಲ್ಲೇ ಸಿಎಂ ಸಿದ್ದರಾಮಯ್ಯ ಕರೆಸಿ ಉದ್ಘಾಟಿಸುವಂತಾಗಲಿ ಎಂದು ಆಶಿಸಿದರು. ಸಿಎಂ ಸಿದ್ದರಾಮಯ್ಯ ಅವರು ಜಾತ್ಯತೀತವಾಗಿ ಅನೇಕ ಕೆಲಸ ಮಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಕನಕದಾಸರ ಜಯಂತಿ ಆಚರಣೆಗೆ ಆದೇಶ ಮಾಡಿದರಲ್ಲದೆ, ಸರ್ಕಾರಿ ರಜೆ ಘೋಷಣೆ ಮಾಡಿದರು. ಶ್ರೀಕ್ಷೇತ್ರ ಕಾಗಿನೆಲೆಯಲ್ಲಿ ಅಭಿವೃದ್ಧಿ ಕಾರ್ಯ ಮಾಡಿದರು ಎಂದರು.