ಸ್ಕೂಟರ್ ಡಿಕ್ಕಿಯಲ್ಲಿ ಇರಿಸಿದ್ದ 5.20 ಲಕ್ಷ ರೂ. ನಗದು ಕಳವು

Published on

ತಿ.ನರಸೀಪುರ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಬ್ಯಾಂಕಿನಿಂದ ಹಣ ಡ್ರಾ ಮಾಡಿ ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದ 5.20 ಲಕ್ಷ ರೂ. ನಗದನ್ನು ಖದೀಮರು ಎಗರಿಸಿ ಪರಾರಿಯಾಗಿದ್ದಾರೆ.

ಪಟ್ಟಣದ ಹಳೇ ಕುರುಬಗೇರಿ ನಿವಾಸಿ ನ್ಯಾಯಬೆಲೆ ಅಂಗಡಿ ಮಾಲೀಕ ಕೃಷ್ಣಮೂರ್ತಿ ಹಣ ಕಳೆದುಕೊಂಡವರು. ಪಟ್ಟಣದ ಕೆನರಾ ಬ್ಯಾಂಕಿನಿಂದ 5.20 ಲಕ್ಷ ರೂ.ಗಳ ಹಣ ಡ್ರಾ ಮಾಡಿ ಸ್ಕೂಟರ್ ಡಿಕ್ಕಿಯಲ್ಲಿ ಹಣ ಇಟ್ಟು ಮೈಸೂರಿನಿಂದ ಬರುತ್ತಿದ್ದ ಮಗಳನ್ನು ಕರೆತರುವ ಸಲುವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸ್ಕೂಟರ್ ನಿಲ್ಲಿಸಿ ನಿಲ್ದಾಣಕ್ಕೆ ತೆರಳಿದ್ದಾಗ ಹೊಂಚು ಹಾಕಿದ್ದ ಕಳ್ಳರು ಹಣವನ್ನು ಕದ್ದೊಯ್ದಿದ್ದಾರೆ.

ಬಸ್ ಇಳಿದು ಬಂದ ಮಗಳನ್ನು ಮನೆಗೆ ಕರೆದೊಯ್ಯಲು ಸ್ಕೂಟರ್ ಬಳಿ ಬರುತ್ತಿದ್ದಂತೆ ಡಿಕ್ಕಿ ತೆರೆದಿರುವುದು ಗಮನಕ್ಕೆ ಬರಲಾಗಿ ಗಾಬರಿಗೊಂಡ ಕೃಷ್ಣಮೂರ್ತಿ ಹಣ ಡಿಕ್ಕಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಡಿಕ್ಕಿ ತೆರೆದು ನೋಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಚಾಲಾಕಿ ಖದೀಮರು ನಗದಿನೊಂದಿಗೆ ಪರಾರಿಯಾಗಿದ್ದರು. ಕೂಡಲೇ ಕೃಷ್ಣಮೂರ್ತಿ ಪೊಲೀಸರಿಗೆ ದೂರು ನೀಡಿದ್ದು, ಡಿವೈಎಸ್‌ಪಿ ಜಿ.ಎಸ್.ರಘು, ಸಿಪಿಐ ಧನಂಜಯ ಹಾಗೂ ಪಿಎಸ್‌ಐ ಜಗದೀಶ್ ಧೂಳ್‌ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆದರೆ ಯಾವುದೇ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಹಾಗೂ ಆಸುಪಾಸಿನಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಪಟ್ಟಣದಲ್ಲಿ ಸ್ಕೂಟರನಲ್ಲಿ ಇಟ್ಟಿರುವ ನಗದು ಕಳವು ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದೆರಡು ತಿಂಗಳ ಹಿಂದೆ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯ ಮಹಿಳೆಯೊಬ್ಬರು ತನ್ನ ಮಗನೊಂದಿಗೆ ಬ್ಯಾಂಕಿನಿಂದ ಹಣ ಪಡೆದು ಬೈಕ್‌ನ ಡಿಕ್ಕಿಯಲ್ಲಿ ಹಣ ಇಟ್ಟು ಮನೆ ಮುಂದೆ ನಿಲ್ಲಿಸಿದ್ದರು. ಅವರು ಮನೆಯಿಂದ ಹೊರಗೆ ಬರುವಷ್ಟರಲ್ಲಿ ಡಿಕ್ಕಿ ಓಪನ್ ಮಾಡಿದ್ದ ಕಳ್ಳರು 3 ಲಕ್ಷ ನಗದನ್ನು ಕಳವು ಮಾಡಿದ್ದರು.

ಬ್ಯಾಂಕಿನಿಂದ ಹಣ ಡ್ರಾ ಮಾಡುವವರನ್ನು ಹಿಂಬಾಲಿಸುವ ಖದೀಮರು ನಂತರ ಚಾಲಾಕಿತನದಿಂದ ಹಣ ಕಳ್ಳತನ ಮಾಡುತ್ತಿದ್ದು, ಸಾರ್ವಜನಿಕರು ಇಂತಹ ಪ್ರಕರಣಗಳಿಂದ ಕೂಡಿಟ್ಟಿದ್ದ ಲಕ್ಷಾಂತರ ರೂ.ಗಳನ್ನ ಕಳೆದುಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಚಾಲಾಕಿ ಕಳ್ಳರನ್ನು ಬಂಧಿಸಿ, ಸಾಮಾನ್ಯ ಜನರು ಹಣವನ್ನು ರಕ್ಷಣೆ ಮಾಡಲು ಪೊಲೀಸರು ಕಾರ್ಯಪ್ರವೃತ್ತರಾಗಬೇಕು ಎಂದು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net