

ಬೆಂಗಳೂರು: ಜಿಎಸ್‌ಟಿ ವಂಚನೆ ಪ್ರಕರಣದಲ್ಲಿ ಬಂಧಿತ ಬ್ಯಾಟರಿ ತಯಾರಿಕ ಕಂಪನಿ ಮಾಲೀಕ ಬೋಗಸ್ ಕಂಪನಿ ಮತ್ತು ಬ್ಯಾಂಕ್ ಖಾತೆ ಮರೆಮಾಚಿ 44.83 ಕೋಟಿ ರೂ. ಇನ್‌ಪುಟ್ ತೆರಿಗೆ (ಐಟಿಸಿ) ಕ್ಲೇಮ್ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಮೆ. ಲಾರಾಗ ಮೆಟಲ್ಸ್ ಪ್ರೈ.ಲಿ. ನಿರ್ದೇಶಕ ಮುಕುಂದ್ ಘನಶ್ಯಾಮ್ ಅಗರ್‌ವಾಲ್ (29) ಬಂಧಿತ. 44.83 ಕೋಟಿ ರೂ. ವಂಚನೆ ಆರೋಪದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ವಿಪುಲ್ ಬನ್ಸಾಲ್ ಸೂಚನೆ ಮೇರೆಗೆ ಜಾರಿ ವಿಭಾಗ ಹೆಚ್ಚುವರಿ ಆಯುಕ್ತ ಚಂದ್ರಶೇಖರ್ ನಾಯಕ್ ನೇತೃತ್ವದ ತಂಡ ಕಂಪನಿ ಮೇಲೆ ದಾಳಿ ನಡೆಸಿತ್ತು.ಆರೋಪಿಯನ್ನು ಬಂಧಿಸಿ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ಜಾಮೀನು ಅರ್ಜಿಯನ್ನು ವಜಾಗೊಳಿಸಿ ಏ.9ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಬ್ಯಾಟರಿ ತಯಾರಿಕೆಗೆ ಅಗತ್ಯವಾದ ಲೆಡ್ ಇಂಗಾಟ್ಸ್ (ಸೀಸದ ಕಡ್ಡಿ) ತಯಾರಿಕೆಯಲ್ಲಿ ಮೆ. ಲಾರಾಗ ಮೆಟಲ್ಸ್ ಪ್ರೈ.ಲಿ ಕಂಪನಿ ಮಾಲೀಕ ಮುಕುಂದ್ ತೊಡಗಿದ್ದರು. ಕಂಪನಿಯೊಂದರಿಂದ ಕಚ್ಚಾ ವಸ್ತುಗಳನ್ನು ಖರೀದಿಸುತ್ತಿದ್ದರು.ಸ್ಕಾೃಪ್ ಸಹ ಖರೀದಿಸಿ ಬ್ಯಾಟರಿ ತಯಾರಿಕೆಗೆ ಬಳಸುತ್ತಿದ್ದರು. ಇದರ ಜೊತೆಗೆ ಬೋಗಸ್ ಕಂಪನಿಗಳ ಕಡೆಯಿಂದಲೂ ಸರಕು ಖರೀದಿಸಿ ಬ್ಯಾಟರಿ ತಯಾರಿಸಿ ಮಾರಾಟ ಮಾಡುತ್ತಿದ್ದರು. ಇದನ್ನು ಎಲ್ಲಿಯೂ ಉಲ್ಲೇಖಿಸಿರಲಿಲ್ಲ.
ಬದಲಿಗೆ ಪೂರೈಕೆದಾರರಿಗೆ ಜಿಎಸ್‌ಟಿ ಪಾವತಿಸುವ ನೆಪದಲ್ಲಿ ಐಟಿಸಿ ಕ್ಲೇಮು ಮಾಡುತ್ತಿದ್ದರು.ಇದರಲ್ಲಿ ಬೋಗಸ್ ಕಂಪನಿಯ ಸರಕಿಗೂ ಕ್ಲೇಮು ತೋರಿಸುತ್ತಿದ್ದ. ಇದಲ್ಲದೆ, ಅಧಿಕೃತ ಪೂರೈಕೆದಾರರಿಗೆ ಜಿಎಸ್‌ಟಿ ಪಾವತಿ ಮಾಡುವಾಗ ತಮಗೆ ಬೇಕಾದ ಬ್ಯಾಂಕ್ ಖಾತೆ ನಂಬರ್ ಹಾಕಿ ಅದರಲ್ಲಿ ಪೂರೈಕೆದಾರರ ಹೆಸರು ನಮೂದು ಮಾಡುತ್ತಿದ್ದ. ಬ್ಯಾಂಕ್ ದಾಖಲೆಯಲ್ಲಿ ಮೇಲ್ನೋಟಕ್ಕೆ ಪೂರೈಕೆದಾರರ ಹೆಸರು ಇರುತ್ತಿತ್ತು ಹೊರತು ಬ್ಯಾಂಕ್ ಖಾತೆ ಬೇರೆಯೇ ಇರುತ್ತಿತ್ತು.
ಆದರೆ, ಆರೋಪಿತರು ಆ ಹಣವನ್ನು ವಾಪಸ್ ಡ್ರಾ ಮಾಡುತ್ತಿದ್ದರು. ಇದೇ ರೀತಿ 250 ಕೋಟಿ ರೂ. ವಹಿವಾಟಿನ ಮೇಲೆ 44.83 ಕೋಟಿ ರೂ. ಮೊತ್ತದ ಅಕ್ರಮ ಐಟಿಸಿ ಕ್ಲೇಮನ್ನು ಮಾಡಿದ್ದರು. ಪೂರೈಕೆದಾರರಿಗೆ ಸಂದಾಯ ಮಾಡಬೇಕಾದ ಮೊತ್ತವನ್ನು ಅವರ ಹೆಸರನ್ನೇ ಹೋಲುವಂತೆ ಬ್ಯಾಂಕ್ ಲಾನುಭವಿಗಳ ಹೆಸರಿಗೆ ಖಾತೆಗೆ ವರ್ಗಾಯಿಸಿದ್ದರು. ಮರಳಿ ಆ ಮೊತ್ತವನ್ನು ತಮಗೇ ವಾಪಾಸಾಗುವಂತೆ ಮಾಡುವ ಮೂಲಕ ಜಿಎಸ್‌ಟಿ ವಂಚನೆ ಮಾಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.