

ಕೋಲಾರ: ನಗರದ ಪ್ರಶಾಂತ್ ನಗರದಲ್ಲಿನ ಎಸ್ಬಿಐ ಎಟಿಎಂಗೆ ಭಾನುವಾರ ರಾತ್ರಿ ನುಗ್ಗಿದ ಕಳ್ಳರು ಬರೋಬ್ಬರಿ 27 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ.
ರಾತ್ರಿ 2ಗಂಟೆ ಸುಮಾರಿಗೆ ಯಂತ್ರವಿರುವ ಕೊಠಡಿಗೆ ನುಗ್ಗಿ ಒಳಗಿನಿಂದ ಶೆಲ್ಟರ್ ಮುಚ್ಚಿಕೊಂಡು ಮಿಷನ್ನಲ್ಲಿದ್ದ 27 ಲಕ್ಷ ರೂ. ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಸ್ಥಳಿಯರು ಸೋಮವಾರ ಬೆಳಗ್ಗೆ ವಾಯುವಿಹಾರ ಮಾಡುವಾಗ ಕೃತ್ಯ ಗಮನಕ್ಕೆ ಬಂದಿದ್ದು, ಗಲ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಬೆರಳಚ್ವು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಕುರಿತು ಗಲ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಪಿ ನಿಖಿಲ್ ಸ್ಥಳಿಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ವಿಶೇಷ ತನಿಖಾ ತಂಡ ರಚನೆ
ಎಟಿಎಂ ಕಳವು ಪ್ರಕರಣ ಜಿಲ್ಲೆಯಲ್ಲಿ ಇದೇನು ಮೊದಲಲ್ಲ. ಈ ಹಿಂದೆಯೂ ಶ್ರೀನಿವಾಸಪುರ, ಬೇತಮಂಗಲ, ಬಂಗಾರಪೇಟೆ, ಚಿಕ್ಕತಿರುಪತಿಯಲ್ಲೂ ಎಟಿಎಂ ಕಳವು ಪ್ರಕರಣಗಳು ಸಂಭವಿಸಿದ್ದರು. ಇದರ ನಡುವೆಯೂ ಈಗ ಕೋಲಾರದಲ್ಲಿ ಕೃತ್ಯ ಎಸಗಿದ್ದಾರೆ. ಎಸ್ಪಿ ಬಿ.ನಿಖಿಲ್ ಅವರು ಪ್ರಕರಣ ಭೇದಿಸಲು ವಿಶೇಷ ತಂಡ ರಚನೆ ಮಾಡಿದ್ದು ತನಿಖೆ ಚುರುಕುಗೊಂಡಿದೆ.