

ಶಿವಮೊಗ್ಗ: ವಿಶ್ವಕರ್ಮ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದಿಂದ ನಿರ್ಮಿಸಲು ಉದ್ದೇಶಿಸಿರುವ ಕರಕುಶಲ ಭವನದ ಕಟ್ಟಡ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ವಾಜಪೇಯಿ ಬಡಾವಣೆ ಮುಖ್ಯರಸ್ತೆಯಲ್ಲಿರುವ ನಿವೇಶನದಲ್ಲಿ ವಿಶ್ವಕರ್ಮ ಕರಕುಶಲ ಭವನದ ನಿರ್ಮಾಣಕ್ಕೆ ಗುದ್ದಲಿಪೂಜೆ ಹಾಗೂ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಹಿಂದುತ್ವಕ್ಕೆ ಶಕ್ತಿಕೊಟ್ಟ ಸಮಾಜವಿದು. ಕರಕುಶಲ ಕೆಲಸಕ್ಕೆ ಜನಪ್ರಿಯ. ಬಹುಹಿಂದಿನಿಂದಲೂ ಶಿಲ್ಪ ಕಲೆಗೆ ಹೆಸರಾಗಿದ್ದಾರೆ. ಕರಕುಶಲ ಕರ್ಮಿಗಳಿಗೆ ಸಹಾಯ ನೀಡಲು ಪ್ರಧಾನಿ ನರೇಂದ್ರ ಮೋದಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.
ಕರಕುಶಲ ಭವನ ಕಟ್ಟಡ ನಿರ್ಮಾಣಕ್ಕೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 20 ಲಕ್ಷ ರೂ. ನೀಡಲಾಗುತ್ತಿದೆ. ಇದರ ಜತೆ ಶಾಸಕರ ಅನುದಾನ ಸೇರಿ 30 ಲಕ್ಷ ರೂ. ಆಗುತ್ತದೆ ಎಂದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿ, ವಿಶ್ವಕರ್ಮ ಸಮಾಜದವರು ಬಹುತೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಜಕಣಾಚಾರಿ ಮುಂತಾದ ಶಿಲ್ಪಿಗಳು ಸಮಾಜದ ಹೆಗ್ಗಳಿಕೆ. ದೇವಾಲಯಗಳ ನಿರ್ಮಾಣಕ್ಕೆ ಸಮಾಜದ ಕೊಡುಗೆ ಅಪಾರ ಎಂದು ತಿಳಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ವಿಶ್ವಕರ್ಮ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಸ್.ಚಂದ್ರಕಾಂತ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಸಂಘದ ಉಪಾಧ್ಯಕ್ಷ ಸಿ.ಪಿ.ಶಿವಕುಮಾರಾಚಾರಿ, ಕಟ್ಟಡ ಸಮಿತಿ ಕಾರ್ಯದರ್ಶಿ ಕೆ.ಈಶ್ವರಾಚಾರ್, ನಿರ್ದೇಶಕರು, ಸಿಇ ಇತರರಿದ್ದರು.