

ನವದೆಹಲಿ: ಕ್ಲಿನಿಕಲ್ ಟ್ರಯಲ್ಗೆ ಒಳಪಡದಿದ್ದರೂ ಕೋವಿಡ್-19 ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮುಂದಾಗಿದೆ. 1,490.40 ಕೋಟಿ ರೂ. ಮೌಲ್ಯದ ಲಸಿಕೆಯನ್ನು ತಯಾರಿಸಲು ಕೇವಲ ಅರ್ಧ ಗಂಟೆಯಲ್ಲಿ ನಿರ್ಧರಿಸಿದ್ದಾಗಿ ಸಂಸ್ಥೆಯ ಮುಖ್ಯಸ್ಥ ಅಡಾರ್ ಪೂನಾವಾಲಾ ತಿಳಿಸಿದ್ದಾರೆ.
ಬ್ರಿಟನ್ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸಿದ್ಧವಾಗುತ್ತಿರುವ ಕೋವಿಡ್-19 ಲಸಿಕೆಯನ್ನು ಸೆರಂ ಇನ್ಸ್ಟಿಟ್ಯೂಟ್ ಭಾರತದಲ್ಲಿ ತಯಾರಿಸಿ ಮಧ್ಯಮ ಆದಾಯದ ರಾಷ್ಟ್ರಗಳಿಗೂ ಸರಬರಾಜು ಮಾಡಲಿದೆ. ನವೆಂಬರ್ ವೇಳೆಗೆ 1,490.40 ಕೋಟಿ ರೂ. ಮೌಲ್ಯದ ಲಸಿಕೆಗಳು ಸಿದ್ಧವಾಗಲಿವೆ. ಭಾರತದಲ್ಲಿ ತಲಾ 1 ಸಾವಿರ ರೂ.ನಂತೆ ಮಾರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.
ಒಂದು ವೇಳೆ ಕ್ಲಿನಿಕಲ್ ಟ್ರಯಲ್ಸ್ನ ಫಲಿತಾಂಶಗಳು ವ್ಯತಿರಿಕ್ತವಾಗಿ ಬಂದಲ್ಲಿ 1,490.40 ಕೋಟಿ ರೂ. ಮೌಲ್ಯದ ಲಸಿಕೆಯನ್ನು ನಾಶಪಡಿಸಬೇಕಾದ ಅಪಾಯವೂ ಇದೆ. ಆದರೂ, ರಿಸ್ಕ್ ತೆಗೆದುಕೊಂಡು ಲಸಿಕೆಯನ್ನು ತಯಾರಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ದ ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾಗಿರುವ ಕೋವಿಡ್-19 ಲಸಿಕೆಯ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ನ ವರದಿಯಲ್ಲಿ ಮೊದಲ ಹಂತದಲ್ಲಿ ತೃಪ್ತಿದಾಯಕ ಫಲಿತಾಂಶ ಲಭ್ಯವಾಗಿದೆ. ಯಾವುದೇ ರೀತಿಯ ಗಂಭೀರವಾದ ಅಡ್ಡಪರಿಣಾಮಗಳನ್ನು (ಸೈಡ್ ಎಫೆಕ್ಟ್ಸ್) ಉಂಟು ಮಾಡದೆ, ಪ್ರತಿಕಾಯ ಮತ್ತು ಟಿ-ಸೆಲ್ನ ರೋಗನಿರೋಧ ಪ್ರತಿಕ್ರಿಯೆಯನ್ನು ತೋರಿರುವುದಾಗಿ ಹೇಳಲಾಗಿತ್ತು.
ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಸೆರಂ ಇನ್ಸ್ಟಿಟ್ಯೂಟ್ನ ಮುಖ್ಯಸ್ಥರು ಭಾರತದಲ್ಲಿ ಪ್ರತಿಯೊಬ್ಬರಿಗೂ ಕೋವಿಡ್-19 ಲಸಿಕೆ ಹಾಕಲು ಕನಿಷ್ಠ ಎರಡು ವರ್ಷಗಳು ಬೇಕಾಗುತ್ತವೆ ಎಂದು ಹೇಳಿದ್ದಾರೆ.
ಆಕ್ಸ್ಫರ್ಡ್ನ ಲಸಿಕೆ ಆಗಸ್ಟ್ನಲ್ಲಿ 3ನೇ ಹಂತದ ಟ್ರಯಲ್ಗೆ ಒಳಪಡುವುದು ಬಹುತೇಕ ಖಚಿತವಾಗಿದೆ. ಅಲ್ಲಿಂದ ಎರಡು ಅಥವಾ ಎರಡೂವರೆಗೆ ತಿಂಗಳಲ್ಲಿ ಈ ಹಂತದ ಟ್ರಯಲ್ ಮುಗಿಯುತ್ತದೆ. ಕ್ಲಿನಿಕಲ್ ಟ್ರಯಲ್ ಫಲಿತಾಂಶ ಸಕಾರಾತ್ಮಕವಾಗಿದ್ದು, ಭಾರತೀಯ ಔಷಧ ನಿಯಂತ್ರಕರು ಲಸಿಕೆ ಸುರಕ್ಷಿತವಾಗಿದ್ದು ಪರಿಣಾಮಕಾರಿಯಾಗಿದೆ ಎಂದು ಹೇಳಿ ಹಸಿರು ನಿಶಾನೆ ತೋರಿದರೆ ನವೆಂಬರ್ನಲ್ಲಿ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.