ಆಟೋ ಚಾಲಕನ ಕೊಲೆಗೈದ ರೌಡಿ

Crime Logo
Published on

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಆಟೋ ಚಾಲಕನೊಂದಿಗೆ ಜಗಳವಾಡಿದ ರೌಡಿ ಮಾರಕಾಸದಿಂದ ಇರಿದು ಕೊಲೆ ಮಾಡಿದ್ದಾನೆ.
ನಾಗಶೆಟ್ಟಿಹಳ್ಳಿ ನಿವಾಸಿ ಮೂರ್ತಿ(೪೧) ಕೊಲೆಯಾದ ಆಟೋ ಚಾಲಕ.
ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಶೆಟ್ಟಿಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಗುರುವಾರ ರಾತ್ರಿ ೧೧ ಗಂಟೆ ಸುಮಾರಿನಲ್ಲಿ ನಾಗಶೆಟ್ಟಿಹಳ್ಳಿ ಬಸ್ ನಿಲ್ದಾಣದ ಬಳಿ ಮೂರ್ತಿ ಜತೆ ಸಚಿನ್ ಎಂಬಾತ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದಾನೆ. ಆ ವೇಳೆ ಮಾತಿಗೆ ಮಾತು ಬೆಳೆದಿದೆ. ಆ ಸಂದರ್ಭದಲ್ಲಿ ಸಚಿನ್ ಫೋನ್ ಮಾಡಿ ರೌಡಿ ಶರಣಪ್ಪನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಈ ಹಿಂದೆ ಶರಣಪ್ಪನಿಗೂ ಹಾಗೂ ಮೂರ್ತಿ ನಡುವೆ ಜಗಳವಾಗಿತ್ತು. ಇವರೆಲ್ಲರೂ ಒಂದೇ ಏರಿಯಾದವರು.
ಶರಣಪ್ಪಗೆ ಮೂರ್ತಿ ವಿರುದ್ಧ ಹಳೆ ದ್ವೆಷವಿತ್ತು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಶರಣಪ್ಪ ಏಕಾಏಕಿ ಮೂರ್ತಿ ಜತೆ ಜಗಳವಾಡಿ ಡ್ರಾಗರ್‌ನಿಂದ ಇರಿದು ಸ್ಥಳದಿಂದ ಸಚಿನ್ ಜತೆ ಪರಾರಿಯಾಗಿದ್ದಾನೆ.
ಇರಿತದಿಂದಾಗಿ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಮೂರ್ತಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸಂಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಶೋಧ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net