

ದೇವದುರ್ಗ: ತಾಲೂಕಿನ ಗಬ್ಬೂರು ಶ್ರೀ ಬೂದಿಬಸವೇಶ್ವರ ಸಂಸ್ಥಾನದಲ್ಲಿ ಜಾತ್ರೋತ್ಸವ ಅಂಗವಾಗಿ ಶನಿವಾರ ಕಡುಬಿನ ಕಾಳಗ ಜರುಗಿತು.
ಪ್ರಸಾದ ಹಾಗೂ ದೇವರಿಗೆ ಅರ್ಪಿಸಲು 6.5 ಕ್ವಿಂಟಾಲ್ ಸಜ್ಜೆ ಕಡುಬು ತಯಾರಿಸಿ ಅರ್ಪಿಸಲಾಯಿತು. ಬೆಳಗ್ಗೆ 7ಗಂಟೆಗೆ ಶ್ರೀಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ರುದ್ರಾಭಿಷೇಕ, ಮಹಾಮಂಗಳಾರತಿ, ಶ್ರೀಸಾಲಿ ಬೂದೆಯ್ಯಸ್ವಾಮಿ, ಸಾಲಿದೊಡ್ಡ ಬಸ್ಸಯ್ಯ ಸ್ವಾಮಿ,
ಶ್ರೀ ಶರಣಯ್ಯಸ್ವಾಮಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ನೀಲಗಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರ ನೇತೃತ್ವ, ಬೂದಿಬಸವ ಶಿವಾಚಾರ್ಯರ ಅಧ್ಯಕ್ಷತೆವಹಿಸಿದ್ದರು.
ವಿವಿಧ ವಾದ್ಯ, ಮೇಳ, ಮಹಿಳೆಯರ ಕುಂಭ ಕಳಸದೊಂದಿಗೆ ಶ್ರೀಮಠದಿಂದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು. ನಂತರ ಸಾವಿರಾರು ಭಕ್ತರ ಮಧ್ಯೆ ಚತುರ್ಥಿ ಉಚ್ಛಾಯ ಶ್ರದ್ಧಾಭಕ್ತಿಯಿಂದ ಜರುಗಿತು.
ಮಹಾರಥೋತ್ಸವ ಇಂದು: ಬೂದಿಬಸವೇಶ್ವರ ಜಾತ್ರೋತ್ಸವ ನಿಮಿತ್ತ ಫೆ.9ರಂದು ಮಹಾರಥೋತ್ಸವ ಜರುಗಲಿದೆ. ಪೀಠಾಧಿಪತಿ ಬೂದಿಬಸವ ಶಿವಾಚಾರ್ಯರ ಅಧ್ಯಕ್ಷತೆ ವಹಿಸುವರು. ಬೆಳಗ್ಗೆ ಶ್ರೀಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಜರುಗಲಿದೆ. ಸಂಜೆ 5.30ಕ್ಕೆ ಮಹಾರಥೋತ್ಸವಕ್ಕೆ ಚಾಲನೆ ಸಿಗಲಿದೆ.