1984ರ ಸಿಖ್ ವಿರೋಧಿ ಗಲಭೆ ಪ್ರಕರಣ; ಸಜ್ಜನ್ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​​​.. ದಯೆ ತೋರುವಂತೆ ಅಪರಾಧಿ ಮನವಿ | Sajjan Kumar

Untitled design (13)
Published on

ನವದಹೆಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಅವರಿಗೆ ರೋಸ್ ಅವೆನ್ಯೂ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಸಜ್ಜನ್ ಕುಮಾರ್(Sajjan Kumar) ಈಗಾಗಲೇ ದೆಹಲಿ ಕಂಟೋನ್ಮೆಂಟ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

1984 ನವೆಂಬರ್ 1ರಂದು ದೆಹಲಿಯ ಸರಸ್ವತಿ ವಿಹಾರ್ ಪ್ರದೇಶದಲ್ಲಿ ಇಬ್ಬರು ಸಿಖ್ಖರಾದ ಜಸ್ವಂತ್ ಸಿಂಗ್ ಮತ್ತು ಅವರ ಮಗ ತರುಣದೀಪ್ ಸಿಂಗ್ ಅವರನ್ನು ಕ್ರೂರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಇಂದು (ಫೆಬ್ರವರಿ 25) ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸಿದೆ. ಈ ಘಟನೆಗೆ ಸಂಬಂಧಿಸಿದ ಎಫ್‌ಐಆರ್ ಅನ್ನು ಉತ್ತರ ದೆಹಲಿಯ ಸರಸ್ವತಿ ವಿಹಾರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ರಂಗನಾಥ ಮಿಶ್ರಾ ಆಯೋಗದ ಮುಂದೆ ದೂರುದಾರರು ನೀಡಿದ ಅಫಿಡವಿಟ್ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಫೆಬ್ರವರಿ 12 ರಂದು ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿತು.

ದೆಹಲಿ ಪೊಲೀಸರು ಮತ್ತು ಸಂತ್ರಸ್ತರು ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪ ಎಂದು ಪರಿಗಣಿಸಿ ಸಜ್ಜನ್ ಕುಮಾರ್ ವಿರುದ್ಧ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದರು. ಆದರೆ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ತೀರ್ಪಿಗೆ ಸ್ವಲ್ಪ ಮೊದಲು, ಸಜ್ಜನ್ ಕುಮಾರ್ ಶಿಕ್ಷೆಯಲ್ಲಿ ದಯೆ ತೋರುವಂತೆ ಮನವಿ ಮಾಡಿದ್ದರು. ಈ ಪ್ರಕರಣದಲ್ಲಿ ನನಗೆ ಮರಣದಂಡನೆ ವಿಧಿಸಲು ಯಾವುದೇ ಆಧಾರವಿಲ್ಲ ಎಂದು ಅವರು ತನ್ನ ವಾದಗಳಲ್ಲಿ ಹೇಳಿದ್ದಾರೆ. ನನಗೆ 80 ವರ್ಷ, ವಯಸ್ಸು ಹೆಚ್ಚಾಗುತ್ತಿರುವುದರಿಂದ ನಾನು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದೇನೆ. ನಾನು 2018ರಿಂದ ಜೈಲಿನಲ್ಲಿದ್ದೇನೆ. ಅಂದಿನಿಂದ ನನಗೆ ಯಾವುದೇ ಫರ್ಲೋ/ಪೆರೋಲ್ ಸಿಕ್ಕಿಲ್ಲ ಎಂದು ಸಜ್ಜನ್ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದರು.

1984ರ ಗಲಭೆಯ ನಂತರ ನಾನು ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಅವರು ಹೇಳಿದರು. ಜೈಲಿನಲ್ಲಿ/ವಿಚಾರಣೆಯ ಸಮಯದಲ್ಲಿ ನನ್ನ ನಡವಳಿಕೆ ಯಾವಾಗಲೂ ಉತ್ತಮವಾಗಿತ್ತು. ನನ್ನ ವಿರುದ್ಧ ಯಾವುದೇ ದೂರು ಬಂದಿಲ್ಲ. ಆದ್ದರಿಂದ ನನ್ನ ಸುಧಾರಣೆಯ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ತಿಳಿಸಿದರು.

ಸಜ್ಜನ್ ಕುಮಾರ್ ಅವರು ಮೂರು ಬಾರಿ ಸಂಸದರಾಗಿರುವುದಾಗಿ ಹೇಳಿದರು. ನಾನು ಸಮಾಜ ಕಲ್ಯಾಣಕ್ಕಾಗಿ ಹಲವು ಯೋಜನೆಗಳಲ್ಲಿ ಭಾಗವಾಗಿದ್ದೇನೆ. ನಾನು ಇನ್ನೂ ನನ್ನನ್ನು ನಿರಪರಾಧಿ ಎಂದು ಪರಿಗಣಿಸುತ್ತೇನೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಮಾನವೀಯ ಅಂಶವನ್ನು ಗಮನದಲ್ಲಿಟ್ಟುಕೊಂಡು ಕನಿಷ್ಠ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net