

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಿಗೆ ಮೇಜು-ಬೆಂಚು, ಇಂಟರಾಕ್ಟಿವ್ ಎಲ್‌ಇಡಿ ಬೋರ್ಡ್‌ಗಳನ್ನು ಒದಗಿಸಲು ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಬೆಂಗಳೂರು ರೋಟರಿ ಕ್ಲಬ್ ಒಡಂಬಡಿಕೆ ಮಾಡಿಕೊಂಡಿದೆ.
ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪನವರ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಮಾಡಲಾಯಿತು.
‘ರೋಟರಿ ಇಂಟರಾಕ್ಟಿವ್ ಲರ್ನಿಂಗ್ 2025-26’ ಹೆಸರಿನ ಈ ಯೋಜನೆಯಡಿ, ರೋಟರಿ ಕ್ಲಬ್ ತನ್ನ ಟ್ರಸ್ಟ್ ಮುಖಾಂತರ ರಾಜ್ಯದ 100 ಸರ್ಕಾರಿ ಶಾಲಾ ತರಗತಿಗಳಿಗೆ ಬೆಂಚು-ಮೇಜುಗಳ ಜತೆಗೆ ಯುಪಿಎಸ್ ಸೌಲಭ್ಯ ಸಹಿತ 75 ಇಂಚಿನ ಇಂಟರಾಕ್ಟಿವ್ ಬೋರ್ಡ್‌ಗಳನ್ನು ಒದಗಿಸಲಿದೆ. ಸುಮಾರು ₹3.5 ಕೋಟಿ ವೆಚ್ಚದಲ್ಲಿ ಜಾರಿಗೊಳ್ಳುವ ಈ ಯೋಜನೆ 2026ರ ಜೂ.30ರೊಳಗೆ ಪೂರ್ಣಗೊಳ್ಳುವ ಗುರಿ ಹೊಂದಿದೆ. ಹೆಚ್ಚುವರಿ ನೆರವು ದೊರೆತರೆ, 2026-27ರಲ್ಲಿ ಇನ್ನಷ್ಟು ತರಗತಿಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗುವುದು ಎಂದು ತಿಳಿಸಿದೆ.
ಒಡಂಬಡಿಕೆಗೆ ಸಹಿ ಹಾಕಿದ ನಂತರ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಸುಖೇನ್, ಕನಿಷ್ಠ 1,000 ಮೇಜು-ಬೆಂಚುಗಳು ಮತ್ತು ಸ್ಮಾರ್ಟ್ ಬೋರ್ಡ್‌ಗಳನ್ನು ಸರ್ಕಾರಿ ಶಾಲೆಗಳಲ್ಲಿ ಒದಗಿಸುವ ಉದ್ದೇಶವನ್ನು ಕ್ಲಬ್ ಹೊಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಆಯುಕ್ತ ಡಾ. ಕೆ.ವಿ. ತ್ರಿಲೋಕ್ ಚಂದ್ರ, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕಿ ವಿದ್ಯಾ ಕುಮಾರಿ, ರೋಟರಿ ಜಿಲ್ಲಾ ಗವರ್ನರ್ ಎಲಿಜಬೆತ್ ಚೆರಿಯನ್ ಉಪಸ್ಥಿತರಿದ್ದರು.
ಸಾರ್ವಜನಿಕ ಶಿಕ್ಷಣ ಬಲಪಡಿಸಲು ಇದು ಮಹತ್ವದ ಹೆಜ್ಜೆಯಾಗಿದೆ. ರೋಟರಿಯ ಈ ಪಾಲ್ಗೊಳ್ಳುವಿಕೆಯಿಂದ ಶಾಲೆಗಳ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಸಮುದಾಯ ಪಾಲ್ಗೊಳ್ಳುವಿಕೆ ಸಾಧ್ಯವಾಗುತ್ತದೆ. - ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ