16ರಿಂದ ರೋಟರಿ ಕ್ಲಬ್ ಜಿಲ್ಲಾ ಸಮ್ಮೇಳನ

geetha rotary
ಬಿ.ಸಿ.ಗೀತಾ
Published on

ಚಿಕ್ಕಮಗಳೂರು: ರೋಟರಿ ಕ್ಲಬ್ ಜಿಲ್ಲಾ (3182) ಸಮ್ಮೇಳನ ಫೆ. 16ರಿಂದ ಮೂರು ದಿನ ನಗರದಲ್ಲಿ ನಡೆಯಲಿದೆ ಎಂದು 3182 ರೋಟರಿ ಜಿಲ್ಲಾ ರಾಜ್ಯಪಾಲರಾದ ಬಿ.ಸಿ.ಗೀತಾ ತಿಳಿಸಿದರು.
ಸಮ್ಮೇಳನದಲ್ಲಿ ಚಿಕ್ಕಮಗಳೂರು, ಉಡುಪಿ, ಹಾಸನ ಹಾಗೂ ಶಿವಮೊಗ್ಗ ಕಂದಾಯ ಜಿಲ್ಲೆಗಳ 3500 ರೋಟರಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೋಟರಿ ಕ್ಲಬ್‌ನ ಇತಿಹಾಸದಲ್ಲಿ ಇದುವರೆಗೆ ಚಿಕ್ಕಮಗಳೂರಿನಲ್ಲಿ ಯಾವುದೇ ರೋಟರಿ ಸಮ್ಮೇಳನ ನಡೆದಿರಲಿಲ್ಲ. ಈ ಬಾರಿ ಬಾಳೆಹೊನ್ನೂರು ರೋಟರಿ ಕ್ಲಬ್ ಘಟಕದ ಅತಿಥ್ಯದಲ್ಲಿ ನಗರದ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದೆ ಎಂದರು.
ಫೆ. 16ರ ಸಂಜೆ 5 ಗಂಟೆಗೆ ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣಾನಾಥ ಸ್ವಾಮೀಜಿ ಸಮಾವೇಶ ಉದ್ಘಾಟಿಸಲಿದ್ದಾರೆ. ರೋಟರಿ ಅಂತಾರಾಷ್ಟ್ರೀಯ ಮಾಜಿ ಅಧ್ಯಕ್ಷ ಕಲ್ಯಾಣ್ ಬ್ಯಾನರ್ಜಿ, ಸಂತೋಷ್ ಪ್ರಧಾನ್, ಅಭಿನಂದನ್ ಶೆಟ್ಟಿ ಹಾಗೂ ಡಿ.ಎಸ್.ರವಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. 17 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ವಲಯದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಡಾ. ಬಿ.ಆರ್.ರವಿಕಾಂತೇಗೌಡ, ಕರ್ನಾಟಕ ಲಿಗಲ್ ಕೌನ್ಸಿಲ್‌ನ ಮಾಜಿ ಅಧ್ಯಕ್ಷ ವಿ.ಆರ್.ಸುದರ್ಶನ್, ಎಐಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸೌಮ್ಯ ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಫೆ. 18 ರಂದು ನಡೆಯಲಿರುವ ಸಮಾರೋಪದಲ್ಲಿ ಚಲನಚಿತ್ರ ನಿರ್ದೇಶಕ ಹಾಗೂ ನಟ ಪ್ರಕಾಶ್ ಬೆಳವಾಡಿ, ಕಲಾವಿದ ಗಣೇಶ್ ಆಚಾರ್ಯ, ಡಾ. ಸಿ.ಎನ್.ಮಂಜುನಾಥ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಸಮಿತಿಯ ಅಧ್ಯಕ್ಷ ಎ.ಎಂ.ನಂಜುಂಡಸ್ವಾಮಿ, ಕಾರ್ಯದರ್ಶಿ ಅನಂತೇಗೌಡ, ಬಿ.ಕೆ.ಗುರುಮೂರ್ತಿ, ಶ್ರೀವತ್ಸ, ತನೋಜ್ ನಾಯ್ಡು, ನಾಗೇಶ್, ರುದ್ರೇಶ್ ಕಡೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net