

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ನಂದಿ ಗಿರಿಧಾಮಕ್ಕೆ ರೋಪ್ ವೇ ಅಳವಡಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ಸರ್ವೇ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಈ ವಿಚಾರವಾಗಿ ಈಗಾಗಲೇ ಪ್ರವಾಸಿಗರಿಂದ ಅಭಿಪ್ರಾಯ ಸಂಗ್ರಹ, ಗಿರಿಧಾಮದ ತಪ್ಪಲಿನ ನಿಗದಿತ ಜಾಗದಲ್ಲಿ ಮಣ್ಣಿನ ಪರೀಕ್ಷೆ ನಡೆಸಲಾಗಿದ್ದು, ಶುಕ್ರವಾರದಿಂದ ಡ್ರೋನ್ ಸರ್ವೇಗೆ ಚಾಲನೆ ನೀಡಲಾಗುತ್ತಿದೆ.
ಕರ್ನಾಟಕದ ಊಟಿ ನಂದಿ ಗಿರಿಗೆ ರೋಪ್ ವೇ ಅಳವಡಿಸಿ ಪ್ರವಾಸಿಗರನ್ನು ಆಕರ್ಷಿಸಬಹುದೆಂಬುದು ನಟ ದಿವಂಗತ ಶಂಕರ್‌ನಾಗ್ ಕನಸು. ಈ ನಿಟ್ಟಿನಲ್ಲಿ 80ರ ದಶಕದಲ್ಲಿಯೇ ಸರ್ಕಾರದೊಂದಿಗೆ ಮಾತುಕತೆ ಸಹ ನಡೆಸಿದ್ದರು. ಆದರೆ, ಅನುಷ್ಠಾನಗೊಂಡಿರಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 2015-16ರ ಬಜೆಟ್‌ನಲ್ಲಿ ರೋಪ್ ವೇ ಅಳವಡಿಕೆಯ ಘೋಷಣೆ ಮಾಡಿದ್ದರು. ಅದರಂತೆ 2017ರ ಮೇನಲ್ಲಿ ಟೆಂಡರ್ ಕರೆಯಲಾಗಿತ್ತು. ಮೂರು ಬಾರಿ ಪ್ರಕ್ರಿಯೆ ಫಲಪ್ರದವಾಗಿರಲಿಲ್ಲ. ಆದರೆ, ಇತ್ತೀಚೆಗೆ ಪವಾಸೋದ್ಯಮ ಇಲಾಖೆ ಸಚಿವ ಸಿ.ಪಿ.ಯೋಗೇಶ್ವರ್ ನೇತೃತ್ವದ ಅಧಿಕಾರಿಗಳು ಸಭೆಯಲ್ಲಿ ಐಡೇಕ್ (ಮೂಲಸೌಕರ್ಯ ಅಭಿವೃದ್ಧಿ ನಿಗಮ) ಸಂಸ್ಥೆ ರೋಪ್ ವೇ ನಿರ್ಮಾಣದ ಪ್ರಾತ್ಯಕ್ಷಿಕೆ ನೀಡಿದ್ದು ಅನುಮೋದನೆ ಸಹ ಸಿಕ್ಕಿದೆ.
ಜಾಗ ಗುರುತು : ರೋಪ್ ವೇ ನಿರ್ಮಾಣಕ್ಕೆ ತೂಬಗೆರೆ ಹೋಬಳಿ ಹೆಗ್ಗಡಿಹಳ್ಳಿ ವ್ಯಾಪ್ತಿಯ ಸರ್ವೇ ನಂಬರ್ 94 ರಲ್ಲಿ 3.20 ಎಕರೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ನಂದಿ ಹೋಬಳಿ ಮಡಕುಹೊಸಹಳ್ಳಿ ವ್ಯಾಪ್ತಿಯ ಸರ್ವೇ ನಂಬರ್ 28 ರಲ್ಲಿ 3.20 ಎಕರೆ ಜಮೀನು ಗುರುತಿಸಲಾಗಿದೆ. ಬೆಟ್ಟದಲ್ಲಿ ಪ್ರವಾಸಿಗರನ್ನು ಇಳಿಸಲು ಮತ್ತು ಹತ್ತಿಸಿಕೊಳ್ಳಲು ಪಾರ್ಕಿಂಗ್ ಸ್ಥಳದ ಬಳಿ 50ಗಿ80 ಮೀಟರ್ ವಿಸ್ತೀರ್ಣದ ಸ್ಥಳ ಗುರುತಿಸಲಾಗಿದೆ.