Squirrel Attack: ರಾಜಸ್ಥಾನದ ವಿವಿಯಲ್ಲಿ 'ಅಳಿಲು' ದರ್ಬಾರ್‌: 20ಕ್ಕೂ ಹೆಚ್ಚು ಜನರಿಗೆ ಕಚ್ಚಿ ಸತಾಯಿಸಿದ ಪುಟ್ಟ ಪ್ರಾಣಿ!

Squirrel Attack
Squirrel Attack
Published on: 
ಉದಯಪುರ: ರಾಜಸ್ಥಾನದ ಉದಯಪುರ ವಿಭಾಗದ ಅತಿದೊಡ್ಡ ಶಿಕ್ಷಣ ಸಂಸ್ಥೆಯಾದ ಮೋಹನ್ ಲಾಲ್ ಸುಖಾಡಿಯಾ ವಿಶ್ವವಿದ್ಯಾಲಯದಲ್ಲಿ (MLSU) ಈಗ ವಿಚಿತ್ರ ಭಯವೊಂದು ಆವರಿಸಿದೆ. ಸಾಮಾನ್ಯವಾಗಿ ಮನುಷ್ಯರನ್ನು ಕಂಡು ಓಡಿಹೋಗುವ ಅಳಿಲು, ಇಲ್ಲಿ ಮಾತ್ರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಮೇಲೆ ನಿರಂತರ ದಾಳಿ ನಡೆಸುತ್ತಾ ಭಯ ಸೃಷ್ಟಿಸಿದೆ. ಕಳೆದ ಆರು ವಾರಗಳಲ್ಲಿ ಈ  ಅಳಿಲು ಸುಮಾರು 20 ಜನರನ್ನು ಕಚ್ಚಿ ಗಾಯಗೊಳಿಸಿದೆ.

ಡೀನ್‌ ಕೂಡ ಅಳಿಲು ದಾಳಿಗೆ ಬಲಿ!

ವಿಶ್ವವಿದ್ಯಾಲಯದ ಕಲಾ ಕಾಲೇಜು ಆವರಣದಲ್ಲಿ ಈ ಅಳಿಲಿನ ಹಾವಳಿ ವಿಪರೀತವಾಗಿದೆ. ಅಳಿಲಿನ ಆಕ್ರಮಣಕಾರಿ ವರ್ತನೆ ಎಷ್ಟು ತೀವ್ರವಾಗಿದೆಯೆಂದರೆ, ಸ್ವತಃ ಕಾಲೇಜಿನ ಡೀನ್ ಅವರೂ ಸಹ ಅಳಿಲು ಕಚ್ಚಿಸಿಕೊಂಡವರ ಪಟ್ಟಿಯಲ್ಲಿದ್ದಾರೆ. ಪ್ರಮುಖವಾಗಿ ಸೈಕಾಲಜಿ (ಮನೋವಿಜ್ಞಾನ) ವಿಭಾಗಕ್ಕೆ ಹೋಗುವ ದಾರಿಯಲ್ಲಿ ಈ ಅಳಿಲು ಹೊಂಚು ಹಾಕಿ ಕುಳಿತಿರುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಆ ದಾರಿಯಲ್ಲಿ ಓಡಾಡಲು ಈಗ ಭಯಪಡುತ್ತಿದ್ದಾರೆ.

ದಾಳಿ ಮಾಡುವುದು ಏಕೆ?

ಸಾಕ್ಷಿಗಳ ಪ್ರಕಾರ, ಈ ಅಳಿಲು ಯಾವುದೇ ಪ್ರಚೋದನೆ ಇಲ್ಲದಿದ್ದರೂ ಹಠಾತ್ತನೆ ಜನರ ಮೇಲೆ ಜಿಗಿಯುತ್ತದೆ ಮತ್ತು ಕಚ್ಚಿದ ಕೂಡಲೇ ಮರಗಳ ಮೇಲೆ ಓಡಿ ಮರೆಯಾಗುತ್ತದೆ. ಸೈಕಾಲಜಿ ವಿಭಾಗದ ಬಳಿ ಈ ಅಳಿಲು ಗೂಡು ಕಟ್ಟಿರಬಹುದು, ಹೀಗಾಗಿ ತನ್ನ ಪ್ರದೇಶವನ್ನು ರಕ್ಷಿಸಿಕೊಳ್ಳಲು ಅದು ಇಂತಹ ಪ್ರಾದೇಶಿಕ ರಕ್ಷಣಾ ವರ್ತನೆ ತೋರುತ್ತಿರಬಹುದು ಎಂದು ವಿಶ್ವವಿದ್ಯಾಲಯದ ಸಿಬ್ಬಂದಿ ಶಂಕಿಸಿದ್ದಾರೆ.

ಚಳ್ಳೆಹಣ್ಣು ತಿನ್ನಿಸಿದ ಚತುರ ಅಳಿಲು!

ಸುರಕ್ಷತೆಯ ದೃಷ್ಟಿಯಿಂದ ಅಳಿಲನ್ನು ಸೆರೆಹಿಡಿಯಲು 'ಅನಿಮಲ್ ಏಡ್' ರಕ್ಷಣಾ ತಂಡವನ್ನು ಎರಡು ಬಾರಿ ಕರೆಯಿಸಲಾಗಿತ್ತು. "ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ನಾವು ಎರಡು ಬಾರಿ ರಕ್ಷಣಾ ತಂಡವನ್ನು ಕರೆಯಿಸಿ, ವಿವಿಧ ಕಡೆಗಳಲ್ಲಿ ಪಂಜರಗಳನ್ನು ಇಟ್ಟಿದ್ದೆವು. ಆದರೆ ಈ ಚತುರ ಅಳಿಲು ಪಂಜರಕ್ಕೆ ಬೀಳದೆ ತಪ್ಪಿಸಿಕೊಳ್ಳುತ್ತಿದೆ" ಎಂದು ಕಾಲೇಜಿನ ಅಸೋಸಿಯೇಟ್ ಡೀನ್ ನವೀನ್ ನವಾನಾ ತಿಳಿಸಿದ್ದಾರೆ. ಅಳಿಲು ಕಂಡ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.

ಅಳಿಲು ಕಚ್ಚಿದರೆ ಅಪಾಯವಿದೆಯೇ?

ಪ್ರಾಣಿ ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಶೈಲೇಂದ್ರ ಕುಮಾರ್ ಶರ್ಮಾ ಅವರ ಪ್ರಕಾರ, ಅಳಿಲು ಕಚ್ಚುವುದರಿಂದ ರೇಬಿಸ್ ರೋಗ ಹರಡುವ ಅಪಾಯವಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ 'ಟೆಟಾನಸ್' (Tetanus) ಚುಚ್ಚುಮದ್ದು ತೆಗೆದುಕೊಳ್ಳುವುದು ಕಡ್ಡಾಯ ಎಂದು ಅವರು ಸಲಹೆ ನೀಡಿದ್ದಾರೆ.

ಆಕ್ರಮಣಕಾರಿ ವರ್ತನೆಗೆ ಸಂಭವನೀಯ ಕಾರಣಗಳು

ಕೆಲವೊಮ್ಮೆ ಪ್ರಾಣಿಗಳಿಗೆ ಭಾಗಶಃ ಅಂಧತ್ವವಿದ್ದರೆ ಅಥವಾ ನಿರ್ದಿಷ್ಟ ಬಣ್ಣಗಳನ್ನು ಕಂಡಾಗ ಕಿರಿಕಿರಿ ಉಂಟಾಗಿ ಆಕ್ರಮಣಕಾರಿಯಾಗಬಹುದು.
ಯಾವುದೋ ನಿರ್ದಿಷ್ಟ ಕಾರಣಕ್ಕಾಗಿ ಅಳಿಲು ಅಸುರಕ್ಷಿತ ಭಾವನೆಯಿಂದ ಇರಬಹುದು.
ತನ್ನ ಗೂಡು ಅಥವಾ ಮರಿಗಳನ್ನು ರಕ್ಷಿಸಿಕೊಳ್ಳುವ ಹಠವೂ ಇದಕ್ಕೆ ಕಾರಣವಾಗಿರಬಹುದು,(ಏಜೆನ್ಸೀಸ್​).