VIDEO| ರಾಕ್​ಸ್ಟಾರ್ ರೇಮೊ

gitar jan 03 2020
Published on

ಬೆಂಗಳೂರು: ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಆಫ್ರಿಕಾದಲ್ಲಿ ಶೂಟಿಂಗ್ ಮಾಡಿಕೊಂಡಿದ್ದ ಈ ಸಿನಿಮಾ ಈಗ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿದೆ.

ರಾಕ್​ಸ್ಟಾರ್ ಅವತಾರದಲ್ಲಿ ನಾಯಕ ಇಶಾನ್ ಗಿಟಾರ್ ಹಿಡಿದು ಆಗಮಿಸಿದ್ದಾರೆ. ಸಿನಿಮಾ ಶುರುವಾಗಿ ಇಲ್ಲಿಯವರೆಗೂ ನಾಯಕನ ಲುಕ್ ರಿವೀಲ್ ಮಾಡದ ನಿರ್ದೇಶಕ ಪವನ್, ಹೊಸ ವರ್ಷದ ಆರಂಭಕ್ಕೆ ರಾಕ್​ಸ್ಟಾರ್ ರೇವಂತ್ ಅವರನ್ನು ಪರಿಚಯಿಸಿದ್ದಾರೆ. ‘ಸಿನಿಮಾದಲ್ಲಿ ಇಶಾನ್ ರಾಕ್​ಸ್ಟಾರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆಗರ್ಭ ಶ್ರಿಮಂತರ ಮನೆಯ ಮಗನಾಗಿ ಅವರ ಪಾತ್ರ ಮೂಡಿಬರಲಿದೆ. ಈಗಾಗಲೇ ಶೇ. 80 ಭಾಗ ಚಿತ್ರೀಕರಣ ಮಾಡಿಕೊಂಡಿದ್ದೇವೆ.’ ಎಂದು ಮಾಹಿತಿ ನೀಡುವ ಪವನ್, ಬೃಹತ್ ವೇದಿಕೆ ಸೃಷ್ಟಿಸಿ ಲೈವ್ ಕನ್ಸರ್ಟ್ ರೀತಿ ಅದ್ದೂರಿ ಹಾಡನ್ನು ಸೆರೆಹಿಡಿಯುವ ತಯಾರಿಯಲ್ಲಿದ್ದಾರೆ.

ಅದಕ್ಕಾಗಿ ಬರೋಬ್ಬರಿ ಒಂದೂವರೆ ಕೋಟಿ ರೂ. ವೆಚ್ಚದ ಸೆಟ್ ಹಾಕುವ ಕೆಲಸ ಪ್ರಗತಿಯಲ್ಲಿದೆ. ‘ಗೂಗ್ಲಿ’ ಸಿನಿಮಾ ಬಳಿಕ ಲವ್​ಸ್ಟೋರಿ ಸಿನಿಮಾಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದ ಪವನ್, ಈಗ ‘ರೇಮೊ’ ಮೂಲಕ ಪ್ರೀತಿ ಪ್ರೇಮದ ಎಳೆ ಹಿಡಿದು ಬಂದಿದ್ದಾರೆ. ತಾರಾಗಣದ ವಿಚಾರದಲ್ಲೂ ಖ್ಯಾತನಾಮ ಕಲಾವಿದರನ್ನೇ ಪವನ್ ಆಯ್ದುಕೊಂಡಿದ್ದಾರೆ. ಚಿತ್ರದಲ್ಲಿ ಇಶಾನ್​ಗೆ ಮೊದಲ ಬಾರಿ ಜೋಡಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದು, ಸಿ.ಆರ್. ಮನೋಹರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

ಮಧೂ ಆಗಮನ

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಮಧೂ ಈಗ ‘ರೇಮೊ’ ಬಳಗಕ್ಕೆ ಆಗಮಿಸಿದ್ದಾರೆ. ಚಿತ್ರದಲ್ಲಿ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಶರತ್ ಕುಮಾರ್​ಗೆ ಜೋಡಿಯಾಗಿದ್ದಾರೆ. ಈ ಹಿಂದೆ ಕನ್ನಡದ ‘ರನ್ನ’, ‘ಸೀತಾರಾಮ ಕಲ್ಯಾಣ’, ‘ಪ್ರೀಮಿಯರ್ ಪದ್ಮಿನಿ’ ಸಿನಿಮಾಗಳಲ್ಲಿ ಮಧೂ ನಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net