

ಬೆಂಗಳೂರು: ಪೀಣ್ಯದ ಚಿಕ್ಕನಾಯಕನಪಾಳ್ಯದಲ್ಲಿ ಒಂಟಿ ವೃದ್ಧೆಯ ಮನೆಗೆ ನುಗ್ಗಿ, ಕೈಕಾಲು ಕಟ್ಟಿಹಾಕಿ ಹಣ ದೋಚಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿಯ ಕಂಪ್ಲಿ ಮೂಲದ ಕಿಶೋರ್ ಕುಮಾರ್(31) ಮತ್ತು ಲೀಲಾವತಿ ನಾಗ್ (34) ಬಂಧಿತರು.
ಸಿಸಿ ಕ್ಯಾಮರಾದಿಂದ ಸಿಕ್ಕಿಬಿದ್ದರು ಪ್ರಕರಣ ದಾಖಲಿಸಿದ ಪೊಲೀಸರು ವೃದ್ಧೆಯ ಮನೆಯ ಸುತ್ತಮುತ್ತಲಿನ ರಸ್ತೆಯಲ್ಲಿನ ಸಿಸಿ ಕ್ಯಾಮರಾ ದೃಶ್ಯ ಪರಿಶೀಲಿಸಿದಾಗ ಕಿಶೋರ್ ಮುಖಚಹರೆ ಸೆರೆಯಾಗಿತ್ತು. ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಆರೋಪಿಗಳು ಚಿಕ್ಕ ನಾಯಕನ ಪಾಳ್ಯ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ವಾಸವಿದ್ದ ವೃದ್ಧೆ ವೆಂಕಟಲಕ್ಷ್ಮಮ್ಮ ಮನೆಗೆ ನುಗ್ಗಿ ಕೃತ್ಯ ಎಸಗಿದ್ದರು. ವೆಂಕಟಲಕ್ಷ್ಮಮ್ಮ ಪತಿ ವರ್ಷದ ಹಿಂದೆ ತೀರಿಕೊಂಡಿದ್ದು, ಒಬ್ಬರೇ ಮನೆಯಲ್ಲಿ ಇರುತ್ತಿದ್ದರು. ವೃದ್ಧೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಲೀಲಾವತಿ ಕೂಲಿಕೆಲಸ ಮಾಡುತ್ತಿದ್ದಳು. ಕಿಶೋರ್ ಖಾಸಗಿ ಸಂಸ್ಥೆ ಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ. ಇಬ್ಬರು ಒಂದೇ ಊರಿನವರಾಗಿದ್ದು ಪರಿಚಿತರಾಗಿದ್ದರು. ಕಿಶೋರ್ ತಂದೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಈ ವೇಳೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು, ಸಾಲ ಬೆಳೆದಿತ್ತು. ಅದನ್ನು ತೀರಿಸಲು ನಗರಕ್ಕೆ ಬಂದಿದ್ದ ತನ್ನ ಪರಿಸ್ಥಿತಿಯನ್ನು ಲೀಲಾವತಿ ಬಳಿ ಹೇಳಿಕೊಂಡಿದ್ದ. ಆಕೆ ತನ್ನ ಮನೆ ಬಳಿ ವಾಸವಿದ್ದ ವೆಂಕಟಲಕ್ಷ್ಮಮ್ಮ ಅವರನ್ನು ಗಮನಿಸಿ ಕಿಶೋರ್ಗೆ ತಿಳಿಸಿದ್ದಳು.
‘ಕೈ ತುಂಬಾ ಸಾಲ ಮಾಡಿಕೊಂಡಿದ್ದೀಯ. ಜೀವನಪರ್ಯಂತ ದುಡಿದರೂ ಸಾಲ ತೀರಿಸುವುದು ಕಷ್ಟ. ಮನೆ ಪಕ್ಕದಲ್ಲಿ ಅಜ್ಜಿಯೊಬ್ಬರು ಒಂಟಿಯಾಗಿ ವಾಸವಿದ್ದಾರೆ. ಆಕೆಯ ಬಳಿ ಹಣ, ಚಿನ್ನಾಭರಣ ಸಿಗುತ್ತದೆ’ ಎಂದು ಹೇಳಿದ್ದಳು.
ಜು.23ರ ಸಂಜೆ 5.30ರಲ್ಲಿ ಲೀಲಾವತಿ ಮನೆಗೆ ಬಳಿಗೆ ಕಿಶೋರ್ ಹೋಗಿದ್ದ. ಇಬ್ಬರೂ ಜತೆಗೂಡಿ ವೆಂಕಟಲಕ್ಷ್ಮಮ್ಮ ಮನೆಗೆ ನುಗ್ಗಿದ್ದರು. ಅಜ್ಜಿಯನ್ನು ಅಡುಗೆ ಕೊಠಡಿಗೆ ಎಳೆದೊಯ್ದು, ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ 50 ಸಾವಿರ ರೂ. ಹಾಗೂ ಕುತ್ತಿಗೆಯಲ್ಲಿದ್ದ ಬೆಳ್ಳಿಯ ಸರ ದೋಚಿ ಪರಾರಿಯಾಗಿದ್ದರು.