

ಬೆಂಗಳೂರು: ಮಾಲೀಕರ ಆಭರಣ ಮಳಿಗೆಯಲ್ಲೇ ಚಿನ್ನಾಭರಣ ಕದ್ದು ಹೊಸ ಅಂಗಡಿ ತೆರೆಯಲು ಉದ್ದೇಶಿಸಿದ್ದ ನೌಕರ ಸಂಜಯನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ರಾಜಸ್ಥಾನ ಮೂಲದ ಪ್ರಮೋದ್ ಕುಮಾರ್ ಜೈನ್ ಬಂಧಿತ. 20.75 ಲಕ್ಷ ರೂ. ಮೌಲ್ಯದ 300 ಗ್ರಾಂ ಚಿನ್ನಾಭರಣ ಮತ್ತು 954 ಗ್ರಾಂ ಬೆಳ್ಳಿ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಜಯನಗರದ ಅಶ್ವತ್ಥನಗರದ ಆಭರಣ ಮಳಿಗೆಯಲ್ಲಿ ಒಂದು ವರ್ಷದಿಂದ ಪ್ರಮೋದ್ ಕೆಲಸ ಮಾಡುತ್ತಿದ್ದ. ಮಾಲೀಕರ ವಿಶ್ವಾಸ ಗಳಿಸಿದ್ದ ಕಾರಣಕ್ಕೆ ಆತನಿಗೆ ಸಂಪೂರ್ಣ ಜವಾಬ್ದಾರಿ ವಹಿಸಿದ್ದರು. ಇದನ್ನೇ ದುರ್ಬಳಕೆ ಮಾಡಿಕೊಂಡ ಆರೋಪಿ, ಪ್ರತಿದಿನ ಒಂದೊಂದಾಗಿ ಆಭರಣ ಕದ್ದು ಮನೆಯಲ್ಲಿ ಸಂಗ್ರಹಿಸಿದ್ದ. ಇದರಲ್ಲಿ ಕೆಲ ಆಭರಣ ಮಾರಾಟ ಮಾಡಿದ್ದ. ಮಾರ್ಚ್‌ನಲ್ಲಿ ಮಾಲೀಕರ ಗಮನಕ್ಕೆ ತರದೆ ಪ್ರಮೋದ್ ಕೆಲಸ ಬಿಟ್ಟಿದ್ದ.
ಬಳಿಕ ಮಾಲೀಕರು, ಅಂಗಡಿಯಲ್ಲಿ ಆಭರಣ ಆಡಿಟ್ ಮಾಡಿದಾಗ ವ್ಯಾತ್ಯಾಸ ಕಂಡುಬಂದಿತ್ತು. ಪ್ರಮೋದ್‌ಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಕೊನೆಗೆ ಅಂಗಡಿ ಮಾಲೀಕ ಕೊಟ್ಟ ದೂರಿನ ಮೇರೆಗೆ ಸಂಜಯನಗರ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಅಲ್ಲದೆ, ಹೊಸ ಅಂಗಡಿ ತೆರೆಯುವ ಉದ್ದೇಶಕ್ಕೆ ಕದ್ದ ಚಿನ್ನಾಭರವನ್ನು ತಾನು ವಾಸವಾಗಿದ್ದ ಕೊಡಿಗೇಹಳ್ಳಿ ಮನೆಯಲ್ಲಿ ಸಂಗ್ರಹಿಸಿದ್ದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.