ರಸ್ತೆಬದಿ ಅನಧಿಕೃತ ಅಂಗಡಿಗಳ ತೆರವು : ಬಿಡದಿ ಪುರಸಭೆ ಕಾರ್ಯಾಚರಣೆ

31 bidadi photo 1 01
Published on

ಬಿಡದಿ :  ಪಟ್ಟಣದ ರಸ್ತೆಗಳ ಇಕ್ಕೆಲಗಳಲ್ಲಿ ತಲೆ ಎತ್ತುತ್ತಿರುವ ಅನಧಿಕೃತ ಅಂಗಡಿ ಮುಂಗಟ್ಟುಗಳ ತೆರವಿಗೆ ಬಿಡದಿ ಪುರಸಭೆ ಮುಂದಾಗಿದೆ.

ಮಂಗಳವಾರ ಬೆಳಗ್ಗೆ ಕಾರ್ಯಾಚರಣೆಗೆ ಇಳಿದ ಪುರಸಭೆ ಅಧಿಕಾರಿಗಳು ನೆಲ್ಲಿಗುಡ್ಡೆ ರಸ್ತೆಯ ರೇಷ್ಮೆ ಇಲಾಖೆ ಕಾಂಪೌಂಡ್ ಮುಂಭಾಗ ಅನಧಿಕೃತವಾಗಿ ನಡೆಯುತ್ತಿದ್ದ ಕಬ್ಬಿಣದ ಪೆಟ್ಟಿಗೆ ಅಂಗಡಿಯನ್ನು ಕ್ರೇನ್ ಸಹಾಯದಿಂದ ತೆರವುಗೊಳಿಸಿ ವಶಪಡಿಸಿಕೊಂಡರು.

ಮುಖ್ಯಾಧಿಕಾರಿ ಆರ್. ರಮೇಶ್ ಮಾತನಾಡಿ, ವಾಹನಗಳು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪಟ್ಟಣದ ರಸ್ತೆಗಳ ಅಕ್ಕಪಕ್ಕ ಯಾವುದೇ ಅಂಗಡಿ ಮುಂಗಟ್ಟು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ, ಕಾನೂನಿನಲ್ಲೂ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಖಚಿತ ಮಾಹಿತಿ ಸಿಕ್ಕ ತಕ್ಷಣ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಯಾರೂ ಕೂಡ ಮತ್ತೊಬ್ಬರಿಗೆ ತೊಂದರೆಯಾಗುವ ರೀತಿ ರಸ್ತೆ ಪಕ್ಕ ಅನಧಿಕೃತವಾಗಿ ಅಂಗಡಿಗಳನ್ನು ತೆರೆಯುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

ಸಾರ್ವಜನಿಕರ ಆಗ್ರಹ: ಬಿಡದಿ ಪಟ್ಟಣದಲ್ಲಿ ರಸ್ತೆ ಬದಿ ತಲೆಎತ್ತುತ್ತಿರುವ ಪೆಟ್ಟಿಗೆ ಅಂಗಡಿಗಳ ತೆರವಿಗೆ ಪುರಸಭೆ ಅಧಿಕಾರಿಗಳು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಅದೇರೀತಿ ಪಟ್ಟಣದ ಮುಖ್ಯರಸ್ತೆ, ಬಸ್ ನಿಲ್ದಾಣದ ಬಳಿಯಿಂದ ಬಿಜಿಎಸ್ ವೃತ್ತ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕೆಲವು ಕಡೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಅಂಗಡಿಗಳನ್ನು ತೆರವುಗೊಳಿಸಿದರೆ, ಪಟ್ಟಣದ ಶುಚಿತ್ವ ಹಾಗೂ ಸೌಂದರ್ಯ ಕಾಪಾಡಬಹುದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net