ಖಾಸಗಿ ವಾಹನಗಳಿಗೆ ರಸ್ತೆ ಸುರಕ್ಷತೆ ಮಾಹಿತಿಯ ಸ್ಟಿಕರ್

HUN-FEB-5-1(ARTO PROGRAMME)
ಹುಣಸೂರು ನಗರದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಾರಿಗೆ ನಿಯಮ ಪಾಲನೆಗಳನ್ನು ತಿಳಿಸುವ ಸ್ಟಿಕರ್‌ಗಳನ್ನು ಅಧಿಕಾರಿಗಳು ವಾಹನಗಳಿಗೆ ಅಂಟಿಸಿದರು. ಎಆರ್‌ಟಿಒ ಭಗವಾನ್ ದಾಸ್, ಹೊನ್ನೇಗೌಡ ಇತರರಿದ್ದರು.
Published on

ಹುಣಸೂರು: 35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಖಾಸಗಿ ವಾಹನಗಳಿಗೆ ರಸ್ತೆ ಸುರಕ್ಷತೆಯನ್ನು ತಿಳಿಸುವ ಸ್ಟಿಕರ್‌ಗಳನ್ನು ಅಂಟಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.

ಸೋಮವಾರ ಸಾರಿಗೆ ಅಧಿಕಾರಿಗಳ ತಂಡ ಕಚೇರಿ ಬಳಿ ಖಾಸಗಿ ವಾಹನಗಳಿಗೆ ರಸ್ತೆ ಸಂಚಾರ ನಿಯಮಗಳ ಪಾಲನೆ ಕುರಿತಾಗಿ ಅರಿವು ಮೂಡಿಸುವ ಸ್ಟಿಕರ್‌ಗಳನ್ನು ಅಂಟಿಸಿ ಚಾಲಕರಿಗೆ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ(ಎಆರ್‌ಟಿಒ)ಎಚ್.ಎಸ್.ಭಗವಾನ್ ದಾಸ್, ವಾಹನಗಳ ಸಂಖ್ಯೆ ದಿನದಿನಕ್ಕೂ ಏರುತ್ತಿದ್ದು, ಸಂಚಾರ ಸುಗಮವಾಗಲು ಚಾಲಕರು ರಸ್ತೆ ಸುರಕ್ಷತಾ ನಿಯಮಗಳ ಸಮರ್ಪಕ ಪಾಲನೆ ಮಾಡುವ ಅಗತ್ಯವಿದೆ. ದ್ವಿಚಕ್ರ ವಾಹನಗಳ ಸವಾರರು ಸೇರಿದಂತೆ ಮಧ್ಯಮ ಮತ್ತು ಭಾರಿ ವಾಹನ ಚಾಲಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಿದಲ್ಲಿ ಬಹುತೇಕ ಅಪಘಾತಗಳನ್ನು ತಡೆಯುವ ಮೂಲಕ ಅಮಾಯಕ ಜೀವಗಳನ್ನು ಉಳಿಸಬಹುದಾಗಿದೆ. ಅವಸರದ, ಅಡ್ಡಾದಿಡ್ಡಿ ಚಾಲನೆ, ಪಾನಮತ್ತರಾಗಿ ಚಾಲನೆ ಮುಂತಾದ ಬೇಜವಾಬ್ದಾರಿ ವರ್ತನೆಗಳೇ ಅಪಘಾತಕ್ಕೆ ಕಾರಣವಾಗುತ್ತಿದೆ. ಇಲಾಖೆ ವತಿಯಿಂದ ಸಾಧ್ಯವಾದಷ್ಟು ಮಟ್ಟಿಗೆ ಚಾಲನಾ ಪರವಾನಗಿ ನೀಡುವ ವೇಳೆ ತರಬೇತಿಯೊಂದಿಗೆ ಅರಿವನ್ನೂ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ. ಅಪಘಾತಗಳನ್ನು ತಡೆಯಲು ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದರು.

ಆರ್‌ಟಿಒ ಸೂಪರಿಂಟೆಂಡೆಂಟ್ ಹೊನ್ನೇಗೌಡ, ಹಿರಿಯ ಮೋಟಾರ್ ನಿರೀಕ್ಷಕ ಎಸ್.ಜಿ.ಶಿವಸ್ವಾಮಿ, ಸಿಬ್ಬಂದಿ ಮತ್ತು ಸಾರ್ವಜನಿಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net