

ಸಾಗರ: ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಸಹಕಾರ ನೀಡುತ್ತಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳನ್ನು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಪ್ರವಾಸಿ ಮಂದಿರದ ಸಭಾಭವನದಲ್ಲಿ ಗುರುವಾರ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, 256.55 ಲಕ್ಷ ರೂ. ವೆಚ್ಚದಲ್ಲಿ 228.13 ಕಿ.ಮೀ. ರಾಜ್ಯ ಹೆದ್ದಾರಿ, 2.37 ಕೋಟಿ ರೂ. ವೆಚ್ಚದಲ್ಲಿ 285.31 ಕಿ.ಮೀ. ಜಿಲ್ಲಾ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ದಸರಾ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದರು.
ಈ ಬಾರಿ ವಿಪರೀತ ಮಳೆಯಿಂದ ಬಹುತೇಕ ರಸ್ತೆಗಳು ಹಾಳಾಗಿವೆ. ರಸ್ತೆಗಳ ವಾರ್ಷಿಕ ನಿರ್ವಹಣೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಂಗಲ್ ಕಟಿಂಗ್, ರಸ್ತೆ ನಾಮಲಕ, ಅಪಘಾತ ವಲಯಗಳಲ್ಲಿ ಎಚ್ಚರಿಕೆ ಲಕ ಹಾಕಲು ಸೂಚಿಸಿದೆ ಎಂದು ತಿಳಿಸಿದರು.
ಪ್ರಗತಿಪಥ ಯೋಜನೆಯಡಿ 20 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ತಾಲೂಕು ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ 16 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಸುಮಾರು 75 ಕೋಟಿ ರೂ. ಪಿಡಬ್ಲುೃಡಿ ಇನ್ನಿತರ ಇಲಾಖೆಯಿಂದ, ಸಣ್ಣ ನೀರಾವರಿ ನಿಗಮದಿಂದ 60 ಕೋಟಿ ರೂ. ಹಣ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.
ಈಜುಕೊಳ ನವೀಕರಣ ಕಾಮಗಾರಿ ಹಾಗೂ ಒಳಾಂಗಣ ಕ್ರೀಡಾಂಗಣಕ್ಕೆ ಲೈಟಿಂಗ್ ವ್ಯವಸ್ಥೆ ಕಲ್ಪಿಸಲು 60 ಲಕ್ಷ ರೂ. ಮಂಜೂರಾಗಿದೆ. ತುಮರಿಯಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ ನಿರ್ಮಾಣಕ್ಕೆ 22 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಸಾಗರ ಉಪವಿಭಾಗೀಯ ಆಸ್ಪತ್ರೆ ಆವರಣದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಅಗ್ನಿಶಾಮಕ ಘಟಕ ಆರಂಭಿಸಲಾಗುತ್ತದೆ ಎಂದು ಹೇಳಿದರು.
ಸಾಗರದಿಂದ ಸೊರಬ ತಾಲೂಕಿನ ಗಡಿ, ಹೊಸನಗರದಿಂದ ಬಟ್ಟೆಮಲ್ಲಪ್ಪ, ಹೊಸನಗರ- ರಿಪ್ಪನ್‌ಪೇಟೆ- ಶಿವಮೊಗ್ಗ ಗಡಿವರೆಗಿನ ರಸ್ತೆ ಮರು ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಗುಣಮಟ್ಟದ ಕಾಮಗಾರಿಗೆ ಅಧಿಕಾರಿಗಳು ಗಮನ ಹರಿಸಬೇಕು. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಅನುದಾನ ವ್ಯವಸ್ಥಿತವಾಗಿ ವಿನಿಯೋಗವಾಗಬೇಕು ಎಂದರು.
ಪಿಡಬ್ಲುೃಡಿ ಎಇಇ ಅನಿಲಕುಮಾರ್, ಶಾಸಕರ ವಿಶೇಷ ಕರ್ತವ್ಯಾಧಿಕಾರಿ ಟಿ.ಪಿ.ರಮೇಶ್, ಶ್ರೀನಿವಾಸ್ ಇತರರಿದ್ದರು.