

ಕೋಲಾರ: ರಾಜ್ಯದ ಇತರೆ ಕ್ಷೇತ್ರಗಳಂತೆ ಲೋಕೋಪಯೋಗಿ ಇಲಾಖೆಯಿಂದ ಮುಳಬಾಗಿಲಿಗೂ ಅನುದಾನ ನೀಡಲಾಗಿದ್ದು, ಯಾವುದೇ ತಾರತಮ್ಯ ಮಾಡಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವರ ಪರ ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ರುದ್ರಪ್ಪ ಪಾಟೀಲ್ ಹೇಳಿದರು.
ವಿಧಾನ ಮಂಡಲ ಅಧಿವೇಶನದಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿವಿಧ ರೀತಿಯ ಹೆದ್ದಾರಿ ನಿರ್ಮಾಣ, ನಿರ್ವಹಣೆಗೆ ನಿಗದಿಪಡಿಸಿದಷ್ಟು ಬರುತ್ತದೆ. ಸಿಎಂ ಕೊಟ್ಟಿರುವುದಕ್ಕೆ ವ್ಯತ್ಯಾಸ ಇರಬಹುದು. ಅತಿಯಾದ ಮಳೆ ಆಗಿ ಹಾನಿಯಾಗಿದ್ದರೆ ಹೆಚ್ಚುವರಿ ಅನುದಾನ ನೀಡಿ ಸಮಸ್ಯೆ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಅಂದಾಜು 6 ಕೋಟಿ ಮೊತ್ತದಲ್ಲಿ 8.95 ಕಿಮಿ ಉದ್ದ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಂಡಿದ್ದು, ಕಾಮಗಾರಿಯು ಪ್ರಗತಿ ಹಂತದಲ್ಲಿದೆ. 54 ಕೋಟಿ ರೂ. ಬೇಕು ಎಂದು ಬೇಡಿಕೆ ಇಟ್ಟಿದ್ದು, ಅಗತ್ಯತೆ ನೋಡಿಕೊಂಡು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಕ್ಷೇತ್ರದ ವ್ಯಾಪ್ತಿಯಲ್ಲಿ 2 ರಾಜ್ಯ ಹಾಗೂ 11 ಜಿಲ್ಲಾ ಹೆದ್ದಾರಿಗಳು ಹಾದು ಹೋಗುತ್ತವೆ. ರಸ್ತೆಗಳಲ್ಲಿ ನಿರ್ಮಾಣ ಆಗಿರುವ ಗುಂಡಿಗಳನ್ನು ಮುಚ್ಚಿಕೊಡಬೇಕು ಎಂದು ಮನವಿ ಮಾಡಲಾಗಿತ್ತು, ಆದರೆ ದಿನಕ್ಕೊಂದು ಉತ್ತರ ನೀಡುವ ಮೂಲಕ ಗೊಂದಲ ಉಂಟು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾದು ಹೋಗಿರುವ 333 ಕಿಮಿ ಉದ್ದದಲ್ಲಿ 84 ಸುಸ್ಥಿತಿಯಲ್ಲಿದೆ, ಅನುದಾನ ಲಭ್ಯತೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸುವುದಾಗಿ ಹೇಳಿದ್ದಾರೆ. ಆಂಧ್ರ ಮತ್ತು ತಮಿಳುನಾಡು ಗಡಿಯಲ್ಲಿರುವ ಕ್ಷೇತ್ರ ಮುಳಬಾಗಿಲು. ಅತಿ ಜರೂರಾಗಿ ಅನುದಾನ ಕೊಡಬೇಕು ಎಂದು ನಿರೀಸಲಾಗಿದೆ. ಶಾಸಕರಿಗೆಲ್ಲ 50 ಕೋಟಿ ರೂ. ನೀಡುತ್ತಾರೆ ಎಂಬುದರಲ್ಲಿ ನಮಗೂ ಅನುದಾನ ಸಿಗುತ್ತದೆ ಅಂದುಕೊಂಡಿದ್ದೇವು. ಅದರಲ್ಲಿ ಅಭಿವೃದ್ಧಿಪಡಿಸಿಕೊಳ್ಳಲು ಯೋಚಿಸಲಾಗಿತ್ತು ಎಂದರು.
ಯಾವುದಕ್ಕೂ ಸರ್ಕಾರದಿಂದ ಉತ್ತರ ಸಿಗುತ್ತಿಲ್ಲ. ಕ್ಷೇತ್ರದಲ್ಲಿ ಯಾವ ಸರ್ಕಾರ ಅಂತ ಕೇಳುವುದಿಲ್ಲ. ಯಾರು ಎಂಎಲ್ಎ ಅಂತ ಕೇಳುತ್ತಾರೆ. ಗುಂಡಿ ಮುಚ್ಚಿದರೆ ಸಾಕಾ, ರಸ್ತೆ ಅಭಿವೃದ್ಧಿಪಡಿಸಿಕೊಡುವುದು ಯಾವಾಗ ಎಂದು ಪ್ರಶ್ನಿಸಿದರು.
* ನಮಗೆ ಅನ್ನವಾದರು ಕೊಡಿಸಿ
ಅಧಿಕಾರಕ್ಕೆ ಬಂದು 3 ವರ್ಷ ಕಳೆದರೂ ಅನುದಾನ ಸಿಗುತ್ತಿಲ್ಲ, ಸರ್ಕಾರದ ತಟ್ಟೆಯಲ್ಲಿ ಬಿರಿಯಾನಿ ಇದೆ. ನಮಗೆ ಕನಿಷ್ಟ ಅನ್ನವಾದರು ಕೊಡಿಸಿ ಎಂದು ಸಮೃದ್ಧಿ ಮಂಜುನಾಥ್ ಮನವಿ ಮಾಡಿದರು. ಎರಡು ವರ್ಷ ಬೇಗ ಮುಗಿದುಬಿಡಲಿ ಅಂತ ದೇವರಲ್ಲಿ ಕೇಳಿಕೊಳ್ಳುತ್ತಿದ್ದೆವೆ. 72 ಮಂದಿ ಶಾಸಕರು ಮತ್ತೆ ಗೆಲ್ಲುವುದು ಗ್ಯಾರಂಟಿಯಿಲ್ಲ. ನಮ್ಮ ನೋವು ಸಿಎಂ, ಡಿಸಿಎಂಗೆ ಯಾವಾಗ ಅರ್ಥ ಆಗುತ್ತದೋ ಗೊತ್ತಿಲ್ಲ. ನಮ್ಮ ಗೋಳು ನೋಡಿ ರಾಜಕೀಯಕ್ಕೆ ಬರುವವರು ಸಹ ಹಿಂಜರಿಯುತ್ತಾರೆ. ಕ್ಷೇತ್ರಕ್ಕೆ 60 ಲಕ್ಷ, ಪಕ್ಕದ ಕ್ಷೇತ್ರಕ್ಕೆ 2 ಕೋಟಿ ಎಸ್ಸಿಪಿ&ಟಿಎಸ್ಪಿ ಯೋಜನೆಯಡಿ ಹಣ ಕೊಟ್ಟಿದ್ದಾರೆ. ಈ ತಾರತಮ್ಯ ಏಕೆ ಎಂಬುದು ಗೊತ್ತಾಗುತ್ತಿಲ್ಲ. ತಾರತಮ್ಯ ತೋರದೆ ಸಮಪಾಲು ಅನುದಾನಕೊಟ್ಟು ಮಕ್ಕಳಂತೆ ನೋಡಿಕೊಳ್ಳಬೇಕು. ಅಪ್ಪ&ಅಮ್ಮ ಇಲ್ಲದೆ ಅನಾಥರಾಗಿದ್ದೇವೆ. ಸಾಮಾಜಿಕ ತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದೇವೆ. ನಮ್ಮ ಪ್ರಶ್ನೆಗಳಿಗೆ ಕೇವಲ ಉತ್ತರಕ್ಕೆ ಸಿಮೀತವಾಗಿದೆ. ಕಾರ್ಯರೂಪಕ್ಕೆ ಬರುತ್ತಿಲ್ಲ, ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.