ತಿರುಪತಿ ಲಡ್ಡು ವಿವಾದ: ಆಂಧ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಮಾಜಿ ಸಚಿವೆ, ನಟಿ ರೋಜಾ ಹೇಳಿಕೆ

Tirumala Laddu
Published on

ಅಮರಾವತಿ: ತಿರುಪತಿ ಲಡ್ಡು ವಿವಾದವನ್ನು ಹುಟ್ಟುಹಾಕುವ ಮೂಲಕ ತಮ್ಮ 100 ದಿನಗಳ ಆಡಳಿತದಲ್ಲಿ ಆಗಿರುವ ದೌರ್ಜನ್ಯವನ್ನು ಮುಚ್ಚಿಹಾಕಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಡೈವರ್ಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವೆ ರೋಜಾ ಅವರು ಗಂಭೀರ ಆರೋಪ ಮಾಡಿದ್ದಾರೆ.

ಪ್ರವಾಹ ಪರಿಸ್ಥಿತಿ, ಮಹಿಳೆಯರ ಮೇಲೆ ನಿರಂತರ ಹಲ್ಲೆ, ವೈಸಿಪಿ ನಾಯಕರ ಮೇಲೆ ಹಲ್ಲೆ ಹಾಗೂ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಿಎಂ ಚಂದ್ರಬಾಬು ನಾಯ್ಡು ಅವರಿಂದ ಸಾಧ್ಯವಾಗಿಲ್ಲ. ಇಷ್ಟೆಲ್ಲಾ ತಪ್ಪು ಮಾಡಿರುವ ಚಂದ್ರಬಾಬು, ಜನರ ಗಮನವನ್ನು ಬೇರೆಡೆ ಸೆಳೆಯಲು ತಿರುಪತಿ ಲಡ್ಡು ವಿವಾದವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಆರೋಪಿಸಿದರು.

ಚಂದ್ರಬಾಬು ನಾಯ್ಡು ತಮ್ಮ ರಾಜಕೀಯ ಲಾಭಕ್ಕಾಗಿ ವೆಂಕಟೇಶ್ವರ ಸ್ವಾಮಿಯನ್ನು ಬಿಡುತ್ತಿಲ್ಲ. ಪ್ರತಿ ಬಾರಿ ಇಂತಹ ವಿವಾದಗಳು ಮುನ್ನೆಲೆಗೆ ಬಂದಾಗ ತಮ್ಮ ಪಕ್ಷದ ಮುಖಂಡರ ಜತೆಗೂಡಿ ಪ್ರಚಾರ ನಡೆಸುತ್ತಿದ್ದಾರೆ. ಚಂದ್ರಬಾಬು ಅವರ ಅನುಚಿತ ಕಾಮೆಂಟ್‌ಗಳನ್ನು ಜನರೇ ಖಂಡಿಸುತ್ತಿದ್ದಾರೆ ಮತ್ತು ಅವರ ವಿರುದ್ಧ ಕೋಪಗೊಂಡಿದ್ದಾರೆ ಎಂದು ರೋಜಾ ಹೇಳಿದರು.

ಟಿಟಿಡಿ ಸ್ವಯಂ ಆಡಳಿತ ಸಂಸ್ಥೆಯಾಗಿದ್ದು, ಸಿಎಂಗೂ ಇದಕ್ಕೂ ಸಂಬಂಧವಿಲ್ಲ ಎಂದು ಸಚಿವ ಲೋಕೇಶ್ ಅವರೇ ಹೇಳಿದ್ದಾರೆ. ಆದರೆ, ಮಾಜಿ ಸಿಎಂ ಜಗನ್ ಪ್ರಾಣಿಗಳ ಕೊಬ್ಬನ್ನು ಬೆರೆಸಿದ್ದಾರೆ ಎಂದು ಚಂದ್ರಬಾಬು ನಾಯ್ಡು ಅವರು ಹೊಸ ಕತೆಯನ್ನು ಸೃಷ್ಟಿಸುತ್ತಿದ್ದಾರೆ. ಈ ಆರೋಪಗಳು ಸಮಂಜಸವಲ್ಲ. ಇಒ ಶ್ಯಾಮಲಾರಾವ್ ಅವರು ಅಧಿಕಾರ ವಹಿಸಿಕೊಂಡ ತಕ್ಷಣ ಶುದ್ಧ ತುಪ್ಪ ಬಳಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಸರಕಾರ ಸುಳ್ಳು ಆರೋಪ ಮಾಡುತ್ತಿದೆ ಎಂದು ರೋಜಾ ಹೇಳಿದರು.

ಜುಲೈ 23ರಂದು ಸಸ್ಯಜನ್ಯ ಎಣ್ಣೆಯನ್ನು ಬೆರೆಸಲಾಯಿತು. ಅದಕ್ಕಾಗಿಯೇ ತುಪ್ಪವನ್ನು ವಾಪಸ್ ಕಳುಹಿಸಲಾಗಿದೆ ಎಂದು ಇಒ ಶ್ಯಾಮಲ ರಾವ್​ ಹೇಳಿಕೆ ನೀಡಿದರು. ಆದರೆ, ಎರಡು ತಿಂಗಳ ನಂತರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿರುವುದರ ಹಿಂದಿನ ಉದ್ದೇಶವೇನು? ಟಿಡಿಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದಾರೆ. ಅಲ್ಲದೆ, ಇಒ ಶ್ಯಾಮಲಾ ರಾವ್ ಮೇಲೆ ಒತ್ತಡ ಹೇರಿ ಅವರಿಂದಲೂ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು ರೋಜಾ ಆರೋಪಿಸಿದರು. ನಿಮ್ಮ ಸರ್ಕಾರ ಇರುವಾಗ ನಡೆದ ಘಟನೆಗೆ ಯಾರು ಹೊಣೆ? ಸಿಎಂ ಚಂದ್ರಬಾಬೋ? ಅಥವಾ ಇಒ ಶ್ಯಾಮಲಾ ರಾವ್ ಅವರಾ? ಎಂದು ರೋಜಾ ಪ್ರಶ್ನಿಸಿದರು.

ಜಗನ್ ಅಧಿಕಾರದಲ್ಲಿದ್ದಾಗ ಪ್ರಧಾನಿ ಮೋದಿ, ಸಿಜೆಐ ಹಾಗೂ ಚಂದ್ರಬಾಬು ಕೂಡ ಕುಟುಂಬ ಸಮೇತ ತಿರುಪತಿಗೆ ಬಂದಿದ್ದರು. ಲಡ್ಡೂ ರುಚಿಯಲ್ಲಿ ಏನಾದರೂ ವ್ಯತ್ಯಾಸವಿದ್ದರೆ ಅಂದು ದೂರು ನೀಡಬೇಕಿತ್ತು ಎಂದು ಪ್ರಶ್ನಿಸಿದರು. ಐದು ವರ್ಷದಲ್ಲಿ ಏನೋ ನಡೆದಿದೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಟಿಟಿಡಿ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುವುದು ಎಷ್ಟು ಸಮಂಜಸ ಎಂದು ರೋಜಾ ಪ್ರಶ್ನಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net