Bihar Election | ತೇಜಸ್ವಿ ಮುಖ್ಯಮಂತ್ರಿಯಾದರೆ ವಕ್ಫ್ ಕಾನೂನು ರದ್ದು: ಆರ್​ಜೆಡಿ ನಾಯಕ, ಇದು ಜಂಗಲ್​ರಾಜ್​ಗೆ ಪ್ರೋತ್ಸಾಹ ಎಂದು ಬಿಜೆಪಿ ತಿರುಗೇಟು

Untitled design (89) (1)
Published on

Patna: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Bihar Election) ಮಹಾಘಟಬಂದನ್​ ಬಹುಮತಗಳಿಸಿ, ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಮುಖ್ಯಮಂತ್ರಿಯಾದರೆ ವಕ್ಫ್ ಕಾನೂನನ್ನು ರದ್ದುಗೊಳಿಸುತ್ತಾರೆ ಎಂದಿರುವ ಆರ್‌ಜೆಡಿ ವಿಧಾನಪರಿಷತ್​ ಸದಸ್ಯ ಖಾರಿ ಸೊಹೈಬ್ ಹೇಳಿಕೆ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ಖಗಾರಿಯಾದಲ್ಲಿ ನಡೆದ ಆರ್‌ಜೆಡಿ ಅಭ್ಯರ್ಥಿ ಡಾ. ಸಂಜೀವ್ ಕುಮಾರ್ ಅವರ ಪ್ರಚಾರ ಸಭೆಯಲ್ಲಿ ಮಾತನಾಡಿದ ಸೊಹೈಬ್, ತೇಜಸ್ವಿ ಯಾದವ್ ಮುಖ್ಯಮಂತ್ರಿಯಾದರೆ, ವಕ್ಫ್ ಕಾನೂನನ್ನು ರದ್ದುಗೊಳಿಸಲಾಗುತ್ತದೆ, ವಕ್ಫ್ ಮಸೂದೆಯನ್ನು ಬೆಂಬಲಿಸಿದವರಿಗೆ ಅವರು ಚಿಕಿತ್ಸೆ ನೀಡುತ್ತಾರೆ ಎಂದು ಹೇಳಿದ್ದಾರೆಂದು ವರದಿಯಾಗಿದೆ.

ಎಮ್​ಎಲ್​ಸಿ ಸೊಹೈಬ್ ಹೇಳಿಕೆಯು ಬಿಜೆಪಿ ನಾಯಕರಿಂದ ಟೀಕೆಗೆ ಗುರಿಯಾಗಿದ್ದು, ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್​ ಮಾಳವೀಯ, ಆರ್‌ಜೆಡಿ ಸದಾ ಕಾನೂನುಬಾಹಿರತೆಯನ್ನು ಉತ್ತೇಜಿಸುತ್ತಿದೆ, ಈಗ ಮತ್ತೊಮ್ಮೆ ಆ ಪಕ್ಷದ ನೈಜ ಮುಖ ಹೊರಬಿದ್ದಿದೆ ಮತ್ತು ಭೂಮಿಯನ್ನು ಲೂಟಿ ಮಾಡುವ ಅವರ ಉದ್ದೇಶ ಸ್ಪಷ್ಟವಾಗಿದೆ ಎಂದರು.

ಸೊಹೈಬ್ ನೀಡಿರುವ ಹೇಳಿಕೆಯ ವಿಡಿಯೋ ತುಣಕನ್ನು ಹಂಚಿಕೊಂಡಿರುವ ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ವಿಪಕ್ಷದ ವಿಧಾನಪರಿಷತ್​ ಸದಸ್ಯನ ಈ ಹೇಳಿಕೆಗಳು ಜಂಗಲ್ ರಾಜ್‌ನ ಹಳೆ ಮುಖವನ್ನು ನೆನಪಿಸುತ್ತಿದ್ದು, ಅದನ್ನು ನಾವೆಲ್ಲಾ ಹತ್ತಿಕ್ಕಬೇಕು, ಕಾಂಗ್ರೆಸ್, ಆರ್‌ಜೆಡಿ ಸುಪ್ರೀಂ ಕೋರ್ಟ್, ಸಂಸತ್ತನ್ನು ಯಾವುತ್ತು ಗೌರವಿಸುವುದಿಲ್ಲ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಹಿರಂಗವಾಗಿ ಅವಮಾನಿಸುತ್ತವೆ ಎಂದು ಆರೋಪಿಸಿದರು.

ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್​ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್​ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್​ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.

ಏನಿದು ವಕ್ಫ್ ಕಾನೂನು ?

ಈ ವರ್ಷದ ಏಪ್ರಿಲ್‌ನಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆ ಜಾರಿಗೆ ಬಂದ ನಂತರ ಈ ವಿವಾದ ಉಂಟಾಗಿದೆ. 1995 ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಿದ ಈ ಕಾನೂನು, ಭಾರತದಾದ್ಯಂತ ವಕ್ಫ್ ಆಸ್ತಿಗಳ ನಿರ್ವಹಣೆ ಮತ್ತು ಪಾರದರ್ಶಕತೆ ತರುವ ಗುರಿಯನ್ನು ಹೊಂದಿರುವ ಸುಧಾರಣೆಗಳನ್ನು ಪರಿಚಯಿಸಿದೆ. ಪ್ರಮುಖ ನಿಬಂಧನೆಗಳಲ್ಲಿ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವುದು, ವಕ್ಫ್ ಮಂಡಳಿಗಳ ನಿಯಮಿತ ಲೆಕ್ಕಪರಿಶೋಧನೆ ಮತ್ತು ಶಿಯಾ, ಪಶ್ಮಂಡಾ, ಬೊಹ್ರಾ ಮತ್ತು ಮುಸ್ಲಿಮೇತರ ಸಮುದಾಯಗಳ ಮಹಿಳೆಯರು ಮತ್ತು ಸದಸ್ಯರನ್ನು ವಕ್ಫ್ ಮಂಡಳಿಗಳಲ್ಲಿ ಸೇರಿಸುವುದು ಸೇರಿವೆ. ವಕ್ಫ್ ಸ್ವತ್ತುಗಳ ಉತ್ತಮ ಆಡಳಿತವನ್ನು ಖಚಿತಪಡಿಸುವುದು ಮತ್ತು ಅವರ ಆದಾಯವನ್ನು ಸಮುದಾಯ ಕಲ್ಯಾಣಕ್ಕಾಗಿ, ವಿಶೇಷವಾಗಿ ಮಹಿಳೆಯರಿಗೆ ಬಳಸುವುದು ಕಾನೂನಿನ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ವಿರೋಧ ಪಕ್ಷಗಳು ಈ ಕಾಯ್ದೆ ಕೆಲವು ನಿಬಂಧನೆಗಳ ಕುರಿತಾಗಿ ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಟೀಕಿಸಿದವು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net