

ಪಾಟ್ನಾ: ಬಿಹಾರದಲ್ಲಿ RJD ಕಾಂಗ್ರೆಸ್ ತಲೆಗೆ ಬಂದೂಕು ಇಟ್ಟು ಸಿಎಂ ಹುದ್ದೆಯನ್ನು ಕಸಿದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ (ನ.02) ಆರೋಪಿಸಿದ್ದಾರೆ.
ಈ ಬಗ್ಗೆ ಅರಾದಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಬಿಹಾರದ ಮಹಾಘಟಬಂಧನ್ನೊಳಗೆ ಭಾರಿ ಒಳಜಗಳ ನಡೆಯುತ್ತಿದೆ. ಅಲ್ಲದೆ, ಕಾಂಗ್ರೆಸ್ ಮತ್ತು ಆರ್‌ಜೆಡಿ ಬಿಹಾರದ ಗುರುತನ್ನು ನಾಶಮಾಡಲು ಕೆಲಸ ಮಾಡುತ್ತಿವೆ. ಮತದಾರರು ಜಾಗರೂಕರಾಗಿರಬೇಕು ಮತ್ತು ಈ ಎರಡೂ ಪಕ್ಷಗಳ ಉದ್ದೇಶಗಳ ಬಗ್ಗೆ ತಿಳಿದಿರಬೇಕು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಆರ್‌ಜೆಡಿ ನಾಯಕನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೆಸರಿಸಲು ಬಯಸಲಿಲ್ಲ. ಆದರೆ ಆರ್‌ಜೆಡಿ ಕಾಂಗ್ರೆಸ್ ತಲೆಗೆ ಬಂದೂಕನ್ನು ಹಿಡಿದು ಮುಖ್ಯಮಂತ್ರಿ ಹುದ್ದೆಯನ್ನು ಕಸಿದುಕೊಂಡಿತು. ಚುನಾವಣೆಗೆ ಮೊದಲೇ ಮಹಾಘಟಬಂಧನ್ ಪಾಲುದಾರರ ನಡುವೆ ತೀವ್ರ ದ್ವೇಷವಿದ್ದು, ಚುನಾವಣೆಯ ನಂತರ ಪರಸ್ಪರ ವಿರುದ್ಧವಾಗಿ ತಿರುಗಿಬೀಳುವ ಸಾಧ್ಯತೆಯಿದೆ ಎಂದು ಮೋದಿ ವ್ಯಂಗ್ಯವಾಡಿದ್ದಾರೆ.
ಮುಂದುವರೆದು ಮಾತನಾಡಿದ ಮೋದಿ, ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವೆ ದೊಡ್ಡ ಸಂಘರ್ಷವಿದೆ. ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ನ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಅಲ್ಲದೆ, ಚುನಾವಣೆಗೆ ಮೊದಲು ಉಭಯ ಪಕ್ಷಗಳ ನಡುವೆ ತುಂಬಾ ದ್ವೇಷವಿದೆ ಮತ್ತು ಚುನಾವಣೆಯ ನಂತರ ಪರಸ್ಪರ ತಿರುಗಿ ಬೀಳುತ್ತಾರೆ. ಇವರನ್ನು ನಂಬಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
ಆರ್‌ಜೆಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ವಿಪಕ್ಷಗಳು ಹಿಂದೂಗಳ ಭಾವನೆಗಳನ್ನು ಅವಮಾನಿಸಿವೆ. ಆರ್‌ಜೆಡಿ ಮಹಾ ಕುಂಭವನ್ನು ಅನಾವಶ್ಯಕ ಎಂದು ಕರೆದಿವೆ. ಅಲ್ಲದೆ, ಪವಿತ್ರ ಛತ್ ಪೂಜೆಯನ್ನು ಅಗೌರವಿಸಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಸಂಪನ್ಮೂಲಗಳ ಮೇಲೆ ಬಿಹಾರದ ಜನರಿಗೆ ಮೊದಲ ಹಕ್ಕು ಇರಬೇಕು. ನುಸುಳುಕೋರರಿಗಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಕಾಂಗ್ರೆಸ್ ಮೇಲೆ ತೀಕ್ಷ್ಣವಾದ ದಾಳಿ ನಡೆಸಿದ ಅವರು, ಬಿ.ಆರ್. ಅಂಬೇಡ್ಕರ್ ಕಾಂಗ್ರೆಸ್ಸಿನ ಮೊದಲ ಕುಟುಂಬಕ್ಕಿಂತ ಹೆಚ್ಚು ಜನಪ್ರಿಯರಾಗುತ್ತಿರುವುದರಿಂದ ಪಕ್ಷವು ಅವಮಾನಿಸಿದೆ ಎಂದು ಮೋದಿ ಆರೋಪಿಸಿದ್ದಾರೆ.
ಆರ್‌ಜೆಡಿ-ಕಾಂಗ್ರೆಸ್ ನಾಯಕರು ನಮ್ಮ ನಂಬಿಕೆಯನ್ನು ಅಗೌರವಿಸುವುದರಲ್ಲಿ ಪರಿಣಿತರು. ನಮ್ಮ ನಂಬಿಕೆಯನ್ನು ಅಗೌರವಿಸುವವರನ್ನು ಬಿಹಾರ ಎಂದಿಗೂ ಕ್ಷಮಿಸುವುದಿಲ್ಲ. ನಮ್ಮ ನಂಬಿಕೆಯನ್ನು ಅಗೌರವಿಸುವವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ವಿಪಕ್ಷಗಳ ವಿರುದ್ಧ ಮೋದಿ ಹರಿಹಾಯ್ದಿದ್ದಾರೆ.
ಆರ್‌ಜೆಡಿ ಬಿಹಾರಕ್ಕೆ 'ಜಂಗಲ್ ರಾಜ್' ಮತ್ತು ತುಷ್ಟೀಕರಣ ರಾಜಕೀಯವನ್ನು ತಂದರೆ, ಕಾಂಗ್ರೆಸ್‌ನ ಗುರುತು 1984 ರ ಸಿಖ್ ನರಮೇಧಕ್ಕೆ ಸಂಬಂಧಿಸಿದೆ. 1984 ರ ನವೆಂಬರ್ 1 ಮತ್ತು 2 ರಂದು ದೆಹಲಿ ಮತ್ತು ದೇಶದ ಹಲವಾರು ಭಾಗಗಳಲ್ಲಿ ಕಾಂಗ್ರೆಸ್ ಸದಸ್ಯರು ಸಿಖ್ಖರ ಹತ್ಯಾಕಾಂಡವನ್ನು ನಡೆಸಿದರು ಎಂದು ಮೋದಿ ಇತಿಹಾಸವನ್ನು ನೆನಪಿಸಿದ್ದಾರೆ. (ಏಜೆನ್ಸೀಸ್)