

ಬೆಂಗಳೂರು: ಇಡೀ ಭಾರತ ಚಿತ್ರರಂಗವೇ ನಮ್ಮ ಕನ್ನಡ ಸಿನಿಮಾಗಳತ್ತ ನೋಡುವಂತೆ ಮಾಡಿದ ನಮ್ಮ ಹೆಮ್ಮೆಯ ಡಿವೈನ್ಸ್ಟಾರ್ ಖ್ಯಾತಿಯ ನಟ ರಿಷಬ್ ಶೆಟ್ಟಿ(Rishab Shetty) 'ಕಾಂತರ ಚಾಪ್ಟರ್-1' ಚಿತ್ರದ ಶೂಟಿಂಗ್ನಲ್ಲಿ ಬಿಜಿ ಇದ್ದು, ಚಿತ್ರ ಕೆಲಸಗಳು ಅತ್ಯಂತ ಬೀರುಸಿನಿಂದ ಸಾಗಿದೆ.ಇದರ ನಡುವೆ ಇದೀಗ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.
ಕಾಂತರ ಸಿನಿಮಾ ದೇಶಾದ್ಯಂತ ಹಿಟ್ ಆದ ಮೇಲೆ ಕಾಂತರ ಚಾಪ್ಟರ್-1 ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ. ಇತರೆ ಸಿನಿಮಾ ಇಂಡಸ್ಟ್ರೀಯಲ್ಲಿ ಕೂಡ ರಿಷಬ್ ಬಹುಬೇಡಿಕೆಯ ನಟ ಆಗಿದ್ದಾರೆ. ಈ ಹಿನ್ನೆಲೆ ಕಾಂತರ ಚಾಪ್ಟರ್ ಬಿಡುಗಡೆ ಮುನ್ನವೇ ನಟ ರಿಷಬ್ ತಮ್ಮ ಮುಂಬರುವ ಎರಡು ಚಿತ್ರಗಳನ್ನು ಘೋಷಣೆ ಮಾಡಿದ್ದಾರೆ.
ಇತ್ತೀಚಿಗಷ್ಟೇ ತೆಲುಗಿನ 'ಜೈ ಹನುಮಾನ್' ಚಿತ್ರದಲ್ಲಿ ನಟಿಸುವುದಾಗಿ ಹೇಳಿದ್ದ ರಿಷಬ್, ಈಗ ಮತ್ತೊಂದು ಪ್ರಾಜೆಕ್ಟ್ 'ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರವನ್ನು ಇದೀಗ ಘೋಷಣೆ ಮಾಡಿದ್ದಾರೆ. ಈ ಘೋಷಣೆಯಿಂದ ಸಿನಿ ಪ್ರಿಯರ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರಲಿರುವ ತೆಲುಗು ಚಿತ್ರರಂಗ ಜೈ ಹನುಮಾನ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ನಟ ರಿಷಬ್ ಶೆಟ್ಟಿ ಸಜ್ಜಾಗಿದ್ದಾರೆ.
ಪೋಸ್ಟರ್ ಅನಾವರಣ: ಸಂದೀಪ್ ಸಿಂಗ್ ನಿರ್ದೇಶನದ ಹಿಸ್ಟಾರಿಕಲ್ ಡ್ರಾಮಾ ಹೊಂದಿರುವ ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರದಲ್ಲಿ ರಿಷಬ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಪೋಸ್ಟರ್ ಕೂಡ ಅನಾವರಣವಾಗಿದೆ. ಪೋಸ್ಟರ್ನಲ್ಲಿ ಶಿವಾಜಿ ಮಹಾರಾಜರ ರೂಪದಲ್ಲಿ ಖಡ್ಗ ಹಿಡಿದು ರಿಷಬ್ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಈ ಪೋಸ್ಟರ್ ನೋಡಿದ ಅಭಿಮಾನಿಗಳು ಥ್ರೀಲ್ ಆಗಿದ್ದಾರೆ. ಅಲ್ಲದೇ, ರಿಷಬ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಂಡಿದ್ದು, 2027ರ ಜನವರಿ 21ಕ್ಕೆ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ ಎಂದು ಬರೆದುಕೊಡಿದ್ದಾರೆ.