ವಿಜೃಂಭಣೆಯ ಮಾರಿಕಾಂಬಾ ಜಾತ್ರೆ

RPT marikaba
ಕೆಂಚನಾಲ ಶ್ರೀ ಮಾರಿಕಾಂಬಾ ದೇವಿಯ ಮಳೆಗಾಲದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
Published on

ರಿಪ್ಪನ್‌ಪೇಟೆ: ಕೆಂಚನಾಲ ಶ್ರೀ ಮಾರಿಕಾಂಬಾ ದೇವಿಯ ಮಳೆಗಾಲದ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಶ್ರೀದೇವಿಯ ಸನ್ನಿಧಿಯಲ್ಲಿ ಮುಂಜಾನೆಯಿಂದಲೇ ಆರಂಭವಾದ ಧಾರ್ಮಿಕ ವಿಧಿವಿಧಾನಗಳ ವಿಶೇಷ ಪೂಜೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಇಷ್ಟಾರ್ಥಸೇವೆ ಸಲ್ಲಿಸಿದರು.
ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವಸ್ಥಾನಕ್ಕೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಸಿಹಿ ತಿನಿಸು, ಪೂಜಾ ಸಾಮಗ್ರಿ, ಮಹಿಳೆಯರ ಸೌಂದರ್ಯ ವರ್ಧಕ, ಮಕ್ಕಳ ಆಟಿಕೆ ವಸ್ತುಗಳು ಆಕರ್ಷಿಸುತ್ತಿದ್ದವು. ಮಳೆಯ ನಡುವೆಯೂ ದೂರದ ಊರುಗಳಿಂದ ತಂಡೋಪತಂಡವಾಗಿ ಜಾತ್ರೆಗೆ ಆಗಮಿಸುತ್ತಿದ್ದ ಭಕ್ತಾದಿಗಳು ದೇವಿಗೆ ಹಣ್ಣುಕಾಯಿ ಸಮರ್ಪಿಸಿ ಪ್ರಾರ್ಥಿಸುತ್ತಿದ್ದರು. ಸರ್ವಜನಾಂಗದವರು ಜಾತ್ರೆಯಲ್ಲಿ ಶ್ರದ್ಧೆಯಿಂದ ಪಾಲ್ಗೊಂಡು ರೂಢಿಗತವಾಗಿರುವ ಅವರವರ ಆಚಾರ ಪದ್ಧತಿಯಂತೆ ದೇವಿಗೆ ಶಾಖಾಹಾರ ನೈವೇದ್ಯ, ಕೋಳಿ ಕುರಿಗಳ ಬಲಿ ನೀಡಿ ಕೃತಾರ್ಥರಾಗುವುದು ಇಲ್ಲಿನ ವಾಡಿಕೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಬೇಸಿಗೆ, ಮಳೆಗಾಲವೆಂದು ವರ್ಷಕ್ಕೆರಡು ಬಾರಿ ಜಾತ್ರೆ ನಡೆಯುವುದು ವಿಶೇಷ. ಕಂದಾಯ ಇಲಾಖೆ ಶಿರಸ್ತೆದಾರ ಕಟ್ಟೆ ಮಂಜುನಾಥ್, ರಾಜಸ್ವ ನಿರೀಕ್ಷಕ ಅಪ್ರೋಜ್, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್, ಪಿಎಸ್‌ಐ ಪ್ರವೀಣ್, ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರ್ೀ, ಜಾತ್ರಾ ಸಮಿತಿ ಅಧ್ಯಕ್ಷ ಬಸವರಾಜ್, ಕಾರ್ಯದರ್ಶಿ ಪರಮೇಶ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net