ಕಲ್ಲು ಕ್ವಾರಿಗೆ ರಸ್ತೆ ನಿರ್ಮಾಣದ ವೇಳೆ ಗಲಾಟೆ; ಗಣಿ ಮಾಲೀಕನಿಂದ ಗುಂಡೇಟು​: ವ್ಯಕ್ತಿಗೆ ಗಾಯ | Stone Quarry

dk-2025-04-23t180349871-6808de37e945b
Published on

ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ಭಾಗದಲ್ಲಿ ಕಲ್ಲು ಕ್ವಾರಿಗೆ ( Stone Quarry) ಜಮೀನಿನ ಮಾರ್ಗದಲ್ಲಿ ರಸ್ತೆ ನಿರ್ಮಾಣದ ವೇಳೆ ಉಂಟಾದ ಗಲಾಟೆಯ ಸಂದರ್ಭದಲ್ಲಿ ಫೈರಿಂಗ್ ನಡೆದು ವ್ಯಕ್ತಿಯೊಬ್ಬನಿಗೆ ಗಾಯವಾಗಿದೆ‌.

ಮಂಚೇನಹಳ್ಳಿ ರವಿ (39) ಗಾಯಾಳು. ಈತನ ತೊಡೆಯ ಭಾಗಕ್ಕೆ ಬುಲೆಟ್ ತಗುಲಿದ್ದು ಮಂಚೇನಹಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಇದೀಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕ್ವಾರಿ ಮಾಲೀಕನಿಂದ ಫೈಯರ್

ಕ್ವಾರಿ ಮಾಲೀಕ ಎನ್ನಲಾದ ಸಕಲೇಶ್ ಗುಂಪಿನಲ್ಲಿ ಪಿಸ್ತೂಲ್ ನಿಂದ ಫೈಯರ್ ಮಾಡಿದತ. ಹಾಗೆಯೇ ಹಲವರಿಗೆ ಪಿಸ್ತೂಲ್ ತೋರಿಸಿ ಭಯ ಬೀಳಿಸಿದ್ದು, ಬನ್ರೋ ಬನ್ನಿ, ನಿಮಗೆ ತಾಕತ್ತು ಇದ್ದಲ್ಲಿ ಬನ್ನಿ ಎಂದು ಗರ್ಜಿಸಿದ್ದಾನೆ. ಇದರಿಂದ ದೊಣ್ಣೆಗಳು ತಗೊಳ್ಳೋರೋ, ಬಿಡೋದು ಬೇಡ, ಏನಾಗುತ್ತದೆ ಅನ್ನೋದನ್ನು ನೋಡೇ ಬಿಡೋಣ ಎಂದು ಕೂಗಾಟದಲ್ಲಿ ಗುಂಪು ರೊಚ್ಚಿಗೇಳುತ್ತಿದ್ದಂತೆ ಕಾರಿನಲ್ಲಿ ಕಾಲ್ಕಿತ್ತಿದ್ದಾನೆ.

ಸಕಲೇಶ್​ಗೂ ತಲೆಗೆ ಗಾಯವಾಗಿದೆ. ಮಾತಿನ ಚಕಮಕಿ ವೇಳೆ ಯಾರೋ ಕಲ್ಲು ಎಸೆದಿದ್ದಾರೆ. ಇದು ತಗುಲಿ ತಲೆಯಿಂದ ರಕ್ತ ಸೋರುತ್ತಿದ್ದಂತೆ ಕಾರಿನಲ್ಲಿದ್ದ ಪಿಸ್ತೂಲ್ ಮತ್ತೆ ತೆಗೆದು ಎದುರಿಸಿದ್ದಾನೆ.

ಪ್ರಕರಣದ ಹಿನ್ನೆಲೆ

ಮಂಚೇನಹಳ್ಳಿಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಪಡೆದುಕೊಂಡಿದ್ದ ಗಣಿ ಗುತ್ತಿಗೆದಾರರು ಅಕ್ರಮವಾಗಿ ಜಮೀನಿನ ನಡುವೆ ದಾರಿಯನ್ನು ನಿರ್ಮಿಸುತ್ತಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹಸಿರಿನ ವಾತಾವರಣದಲ್ಲಿ ಗಣಿಗಾರಿಕೆಯಿಂದ ಪರಿಸರ ಹಾಳಾಗುತ್ತದೆ. ಕೃಷಿ ಚಟುವಟಿಕೆಗೂ ಮಾರಕ. ಇದಕ್ಕೆ ಕಲ್ಲು ಕ್ವಾರಿಗೆ ಅನುಮತಿ ನೀಡಬಾರದು ಎಂದು ಸ್ಥಳೀಯರು ಒತ್ತಾಯಿಸಿಕೊಂಡು ಬಂದಿದ್ದಾರೆ. ಜನರ ವಿರೋಧದ ನಡುವೆಯೂ ಅಧಿಕಾರಿಗಳು ಪ್ರಭಾವಿಗಳ ಶಿಫಾರಸ್ಸಿಗೆ ಮಣಿದು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದ್ದು, ಗಣಿ ಮಾಲೀಕರು ಕರೆ ತಂದಿದ್ದ ಗುಂಪು ಹಾಗೂ ಸ್ಥಳೀಯ ಗುಂಪಿನ ನಡುವೆ ಗಲಾಟೆ ನಡೆದಿದೆ.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net