ಜಗತ್ತಿನ ಅತಿದೊಡ್ಡ ಮೃಗಾಲಯ ಗುಜರಾತ್​ನ ಜಾಮ್​ನಗರದಲ್ಲಿ ತಲೆಎತ್ತಲಿದೆ: ಅಂಬಾನಿಯ ಕನಸಿನ ಪ್ರಾಜೆಕ್ಟ್

ZOO 9 May 20
Published on

ಅಹಮದಾಬಾದ್​: ಜಗತ್ತಿನ ಅತಿದೊಡ್ಡ ಮೃಗಾಲಯ ಗುಜರಾತಿನ ಜಾಮ್​ನಗರದಲ್ಲಿ ತಲೆಎತ್ತಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇದರ ನಿರ್ಮಾಣ ಮಾಡಲಿದೆ ಎಂಬ ವಿಚಾರವನ್ನು ಗುಜರಾತ್​ನ ಮುಖ್ಯಮಂತ್ರಿ ಕಚೇರಿಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಂ.ಕೆ.ದಾಸ್​ ಅಸೋಚಾಮ್​ ಫೌಂಡೇಷನ್ ವೀಕ್ 2020 ಕಾರ್ಯಕ್ರಮದಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ.

ಜಗತ್ತಿನ ಅತಿದೊಡ್ಡ ಪ್ರತಿಮೆ ಏಕತಾ ಪ್ರತಿಮೆ ಗುಜರಾತಿನಲ್ಲಿರುವಂತೆ, ಜಗತ್ತಿನ ಅತಿದೊಡ್ಡ ಮೃಗಾಲಯವೂ ಗುಜರಾತಿನಲ್ಲೇ ನಿರ್ಮಾಣವಾಗಲಿದೆ. ಒಂದೇ ಜಾಗದಲ್ಲಿ ಅತಿಹೆಚ್ಚು ಬಗೆಯ ಪ್ರಾಣಿ ಸಂಕುಲವಿರುವ ಮೃಗಾಲಯ ಇದಾಗಿರಲಿದ್ದು, ಜಾಮ್​ನಗರದಲ್ಲಿ ನಿರ್ಮಾಣವಾಗಲಿದೆ. ಇದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಮುಖ್ಯಸ್ಥ ಮುಖೇಶ್ ಅಂಬಾನಿಯ ಕಿರಿಯ ಮಗ ಅನಂತ ಅಂಬಾನಿಯ ಕನಸಿನ ಪ್ರಾಜೆಕ್ಟ್​ ಆಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ಮಾಣ ನೆರವೇರಿಸಲಿದೆ.

ಇದಕ್ಕೆ ಈಗಾಗಲೇ ಸೆಂಟ್ರಲ್ ಝೂ ಅಥಾರಿಟಿ ಅನುಮತಿ ನೀಡಿದೆ. ಈ ಮೃಗಾಲಯಕ್ಕೆ ಗ್ರೀನ್ಸ್ ಝೂವಾಲಾಜಿಕಲ್​ ರೆಸ್ಕ್ಯೂ ಆ್ಯಂಡ್ ರಿಹ್ಯಾಬಿಲಿಟೇಶನ್​ ಕಿಂಗ್ಡಂ ಎಂಬ ಹೆಸರು ಇರಲಿದೆ. 250.1 ಎಕರೆ ಪ್ರದೇಶದಲ್ಲಿ ಈ ಮೃಗಾಲಯವನ್ನು ಅಭಿವೃದ್ಧಿಪಡಿಸಲಾಗುತ್ತದೆ. ರಿಲಯನ್ಸ್ ಇಂಡಸ್ಟ್ರಿಯ ಮೋಟಿ ಖಾವ್ಡಿ ರಿಫೈನರಿ ಪ್ರಾಜೆಕ್ಟ್​ ಸಮೀಪದಲ್ಲೇ ಈ ಮೃಗಾಲಯ ಇರಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಸೆಂಟ್ರಲ್ ಝೂ ಅಥಾರಿಟಿಯ ವೆಬ್​ಸೈಟ್​ನಲ್ಲಿದೆ ಎಂದು ದಾಸ್ ಹೇಳಿದ್ದಾರೆ. (ಏಜೆನ್ಸೀಸ್ )

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net