ಹಕ್ಕು, ಕರ್ತವ್ಯ ಒಂದೇ ನಾಣ್ಯದ ಎರಡು ಮುಖ

yuva siri
ಕೋಲಾರದ ನೂತನ ಪದವಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯುವ ಸಿರಿ ಸಂವಿಧಾನ ಸಂಭ್ರಮ ಕಾರ್ಯಕ್ರಮವನ್ನು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್​ ಎಸ್​.ಹೊಸಮನಿ ಉದ್ಘಾಟಿಸಿದರು.
Published on

ಕೋಲಾರ: ಹಕ್ಕುಗಳು, ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಂಗಳಿದ್ದಂತೆ, ಈ ಎರಡರ ಅರಿವು ಪಡೆದುಕೊಂಡಾಗ ಮಾತ್ರ ಸಮಸ್ಯೆಗಳನ್ನು ಬದಿಗಿಟ್ಟು ಮುನ್ನಡೆಯಲು ಸಾಧ್ಯ ಎಂದು ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸುನೀಲ್​ ಎಸ್​.ಹೊಸಮನಿ ಹೇಳಿದರು.

ನಗರದ ನೂತನ ಪದವಿ ಪೂರ್ವ ಕಾಲೇಜಿನಲ್ಲಿ ಸಂವಾದ ಯುವ ಸಂಪನ್ಮೂಲ ಕೇಂದ್ರ, ಕರ್ನಾಟಕ ಯುವ ಮುನ್ನಡೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಯುವ ಸಿರಿ ಸಂವಿಧಾನ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜ ಇಷ್ಟು ಮುಂದುವರೆದಿದ್ದರೂ ಮೂಲ ಕರ್ತವ್ಯಗಳ ಬಗ್ಗೆ ಮಾತನಾಡುವುದಿಲ್ಲ, ಕರ್ತವ್ಯಗಳನ್ನು ಜೀವನದಲ್ಲಿ ಅಳವಡಿಕೆ ಮಾಡಿಕೊಂಡಾಗ ಮಾತ್ರ ಉತ್ತಮ ಸಮಾಜ ನಿಮಾರ್ಣ ಸಾಧ್ಯ. ಮನುಷ್ಯ, ಪ್ರಾಣಿ, ಪಕ್ಷಿಗಳಿಗೆ ಜೀವಿಸುವ ಹಕ್ಕು ಇದೆ. ಇದರ ಬಗ್ಗೆ ವಿದ್ಯಾರ್ಥಿಗಳು ಅರಿವು ಪಡೆದುಕೊಳ್ಳಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ 80 ಕೋಟಿ ಸಸಿಗಳನ್ನು ನಾಟಿ ಮಾಡಿ ಪೋಷಿಸುವ ಅಭಿಯಾನ ಶುರುಮಾಡಲಾಗಿದೆ. ಮಳೆ ಬಂದು ಮಲೆನಾಡು ಭಾಗದಲ್ಲಿ ಪ್ರವಾಹ ಬಂದಿದೆ, ಆದರೆ ಕೋಲಾರದಲ್ಲಿ ಪ್ರವಾಹ ಬರುವುದಿಲ್ಲ. ಅಭಿಯಾನದ ಯಶಸ್ಸುಗೊಳಿಸಲು ಯುವಕರು ಸಹಕಾರ ನೀಡಬೇಕು. ಹುಟ್ಟು ಹಬ್ಬದಿನದಂದು ಕೇಕ್​ ಕತ್ತರಿಸುವ ಮೂಲಕ ಆಚರಣೆ ಮಾಡಿಕೊಳ್ಳುತ್ತೀರ, ಜತೆಗೆ ಖಾಲಿ ಜಾಗದಲ್ಲಿ ಗಿಡನೆಟ್ಟು ಪೋಷಣೆ ಮಾಡಿ ಅದು ಸಮಾಜಕ್ಕೆ ನೀಡಿದ ಕೊಡುಗೆಯಾಗುತ್ತದೆ ಎಂದು ಎಚ್ಚರಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್​.ಆಂಜನೇಯರೆಡ್ಡಿ ಮಾತನಾಡಿ, ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಕೆರೆಗಳಿವೆ, ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಕಲ್ಪಿಸಿರುವ ಕಾಲುವೆಗಳು ಇಂದು ಮಾಯವಾಗುತ್ತಿವೆ, ಅವುಗಳನ್ನು ರಕ್ಷಣೆ ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚು ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಿಂದೆ ಕೆರೆಗಳಲ್ಲಿ ನೀರು ತುಂಬಿ ತುಳುಕುತ್ತಿತ್ತು, ಈ ಭಾಗದಲ್ಲಿ ಯಾವ ನದಿಗಳು ಇದ್ದವು ಎಂಬುದನ್ನು ಭೂಪಟದಲ್ಲಿ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ. ಭಾನಾತ್ಮಕವಾಗಿ ಮಾತನಾಡುವವರು ಬಹಳಷ್ಟು ಮಂದಿ ಇದ್ದಾರೆ, ವೈಜ್ಞಾನಿಕವಾಗಿ ನೋಡುವವರಿಲ್ಲ. ಕೆರೆ, ಕಾಲುವೆ ರಾಜಕಾಲುವೆ ಒತ್ತುವರಿಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮಲ್ಲಿ ಸಾಕ್ಷರತೆಯಿದ್ದರೂ ಸಹ ಪರಿಸರ ಕಾನೂನಿನ ಬಗ್ಗೆ ಅರಿವಿಲ್ಲದಂತಾಗಿದೆ. ಕೆರೆಗಳನ್ನು ರಕ್ಷಣೆ ಮಾಡಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿಗಳನ್ನು ರಚನೆ ಮಾಡಲಾಯಿತು. ಸಾಮಾಜಿಕ ಹೋರಾಟ, ದಲಿತ, ಕನ್ನಡ, ರೈತರ ಸಂಘಟನೆಗಳು ಮಾತನಾಡುವುದು ನೆಲ, ಜಲ ರಕ್ಷಣೆಗಾಗಿ ಅಂತ. ಪ್ರತಿಯೊಬ್ಬ ನಾಗರಿಕರು ಕೈ ಜೋಡಿಸಿದರೆ ಮಾತ್ರ ಜಲಮೂಲಗಳ ರಕ್ಷಣೆ ಸಾಧ್ಯ. ಕುಡಿಯುವ ನೀರು ಕೊಡಿ ಅಂತ ಕೇಳುವುದು ಪ್ರತಿಯೊಬ್ಬರ ಹಕ್ಕು ಎಂದು ಹೇಳಿದರು.
ಯುವ ಗ್ರಾಮಸಭೆಗೆ ಒತ್ತಾಯ
ವ್ಯವಸ್ಥೆಯಲ್ಲಿ ಆಗುವ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುವ, ಗ್ರಹಿಸುವ ಶಕ್ತಿ ಯುವಕರಿಗೆ ಇರಬೇಕು. ತರಗತಿ ಬಿಟ್ಟು ನಡೆಯುವ ಕಾರ್ಯಕ್ರಮಗಳು ಪಾಠ ಅಲ್ಲ, ಅದು ಜೀವನದ ಪಾಠ. ಹವಾಮಾನ ವೈಪರೀತ್ಯದಿಂದ ಗುಡ್ಡ ಕುಸಿತ ಆಯಿತು, ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಸುಮಾರು ಸಿಗುತ್ತದೆ. ಆದರೆ ಮನುಷ್ಯ ಜಾಗೃತನಾಗಬೇಕು. ಯುವಕರಿಗಾಗಿ ಗ್ರಾಮೀಣ ಭಾಗದಲ್ಲಿ ವಿಶೇಷ ಗ್ರಾಮ ಸಭೆಗಳನ್ನು ನಡೆಸುವುದರಿಂದ ನಿರುದ್ಯೋಗ ಸೇರಿ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಸರ್ಕಾರ ಗಮನಹರಿಸಿ ಯುವ ಗ್ರಾಮಸಭೆ ನಡೆಸಲು ಅನುಮತಿ ನೀಡಬೇಕು ಎಂದು ಸಂವಾದ ಸಂಸ್ಥೆಯ ಸಹ ಕಾರ್ಯನಿರ್ವಾಹಕ ಕೆ.ಜನಾರ್ದನ್​ ಒತ್ತಾಯಿಸಿದರು.
ಪ್ರಾಂಶುಪಾಲೆ ಎಂ.ದಾಕ್ಷಾಯಿಣಿ, ಗಮನ ಸಂಸ್ಥೆ ಅಧ್ಯಕ್ಷೆ ಶಾಂತಮ್ಮ, ಪ್ರಧ್ಯಾಪಕ ಪ್ರೊ.ಅರಿವು ಶಿವಪ್ಪ, ಚಿತ್ರನಟಿ-ಗಾಯಕಿ ವೈ.ಜಿ.ಉಮಾ, ರೈತ ಸಂದ ಕಾರ್ಯಾಧ್ಯಕ್ಷ ಶಿವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net