

ಬೆಂಗಳೂರು: ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗ್ರಿಲ್ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬಾಗಲೂರು ನಿವಾಸಿ ಮೊಹಮ್ಮದ್ ಸುಹೇಲ್(೨೫) ಮೃತ ಸವಾರ. ಗಾಯಗೊಂಡಿರುವ ಹಿಂಬದಿ ಸವಾರ ಅನಿರುದ್ಧ್ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಶನಿವಾರ ರಾತ್ರಿ ೮.೩೦ಕ್ಕೆ ಏರ್‌ಪೋರ್ಟ್ ರಸ್ತೆಯ ಬಿಎಸ್‌ಎಫ್ ಕ್ಯಾಂಪ್ ಬಳಿ ಈ ಘಟನೆ ನಡೆದಿದೆ.
ಕೇರಳ ಮೂಲದ ಮೃತ ಸವಾರ ಮೊಹಮ್ಮದ್ ಸುಹೇಲ್ ಇಂಡಿಗೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಗರದ ಬಾಗಲೂರಿನಲ್ಲಿ ಸ್ನೇಹಿತ ಅನಿರುದ್ಧ್ ಜತೆಗೆ ಬಾಡಿಗೆ ರೂಮ್‌ನಲ್ಲಿ ನೆಲೆಸಿದ್ದರು. ಶನಿವಾರ ರಾತ್ರಿ ಸುಹೇಲ್ ಮತ್ತು ಅನಿರುದ್ಧ್ ಹುಣಸಮಾರನಹಳ್ಳಿಯಲ್ಲಿ ಊಟು ಮುಗಿಸಿಕೊಂಡು ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನದಲ್ಲಿ ಏರ್‌ಪೋರ್ಟ್ ರಸ್ತೆಯಲ್ಲಿ ನಗರದ ಕಡೆಗೆ ಬರುತ್ತಿದ್ದರು. ಈ ವೇಳೆ ಬಿಎಸ್‌ಎಫ್ ಕ್ಯಾಂಪ್ ಬಳಿ ಬರುವಾಗ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಸ್ತೆಯ ಎಡಭಾಗದ ಗ್ರಿಲ್ ತಡೆಗೆ ಗೋಡೆಗೆ ಡಿಕ್ಕಿ ಹೊಡೆದಿದೆ.
ಹೆಲ್ಮೆಟ್ ಧರಿಸಿರಲಿಲ್ಲ:
ಡಿಕ್ಕಿಯ ಭಸಕ್ಕೆ ಸವಾರರಿಬ್ಬರೂ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಸ್ಥಳೀಯರು ನೆರವಿಗೆ ಧಾವಿಸಿ ಗಾಯಾಳುಗಳಿಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಲ್ಮೆಟ್ ಧರಿಸದ ಪರಿಣಾಮ ಸವಾರ ಸುಹೇಲ್ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ಭಾನುವಾರ ಮುಂಜಾನೆ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಅನಿರುದ್ಧ್ ಬಲಗಾಲಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.