

ಸೊರಬ: ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಸೋಮವಾರವೂ ಮುಂದುವರಿದಿದೆ. ಭಾನುವಾರ ರಾತ್ರಿಯಿಂದ ಬೆಳಗ್ಗೆಯವರೆಗೆ ಸರಾಸರಿ 45.5 ಮಿ.ಮೀ ಮಳೆ ದಾಖಲಾಗಿದೆ.
ಸೋಮವಾರ ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಇತ್ತು. ಮಧ್ಯಾಹ್ನದ ವೇಳೆಗೆ ಮೋಡಕವಿದು ಗುಡುಗು ಸಹಿತ ಬಿರುಸಿನ ಮಳೆ ಸುರಿಯಲಾರಂಭಿಸಿತು. ನಿರಂತರ ಮಳೆಯಿಂದಾಗಿ ಭತ್ತ ಮತ್ತು ಮೆಕ್ಕೆಜೋಳದ ಬೆಳೆಗಳಿಗೆ ಹಾನಿಯಾಗಿದೆ. ಅಡಕೆ ಮತ್ತು ಶುಂಠಿ ಬೆಳೆಗಳಿಗೆ ಕೊಳೆರೋಗ ಬಾಧೆ ವ್ಯಾಪಕವಾಗಿ ಬೆಳೆಗಾರರು ಕಂಗಾಲಾಗಿದ್ದಾರೆ.
ತಾಲೂಕಿನ ಕಮರೂರು ಗ್ರಾಮದ ಹಳ್ಳ ಉಕ್ಕಿ ಹರಿದ ಪರಿಣಾಮ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಭತ್ತ ನೆಲಕ್ಕಚ್ಚಿದೆ. ಜಡೆ ಗ್ರಾಮದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಭತ್ತ ನೆಲಕ್ಕೆ ಬಿದ್ದಿದೆ. ಆನವಟ್ಟಿ ಸಮೀಪ ವರದಾ ನದಿ ಪ್ರವಾಹದಿಂದಾಗಿ 70 ಎಕರೆ ಭತ್ತದ ಬೆಳೆದ ಜಮೀನು ಜಲಾವೃತವಾಗಿದೆ. ಚಂದ್ರಗುತ್ತಿ ಹೋಬಳಿಯ ಚಿಕ್ಕಲಗೋಡು ಗ್ರಾಮದಲ್ಲಿಯೂ ಕಟಾವಿಗೆ ಬಂದಿದ್ದ ಭತ್ತ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಮತ್ತು ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.