ಇದ್ಯಾವುದು ಇಲ್ಲಿಗೆ ಮುಗಿಯಲ್ಲ..! 13ನೇ ದಿನಕ್ಕೆ ಕಾಲಿಟ್ಟ ವೈದ್ಯರ ಉಪವಾಸ ಸತ್ಯಾಗ್ರಹ | RG Kar

rg kar
Published on

ಕೋಲ್ಕತ: ಆರ್‌ಜಿ ಕರ್ (RG Kar Case) ಆಸ್ಪತ್ರೆಯಲ್ಲಿ ತಮ್ಮ ಸಹೋದ್ಯೋಗಿ, ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಿಯ ವೈದ್ಯರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಇಂದಿಗೆ 13ನೇ ದಿನಕ್ಕೆ ಕಾಲಿಟ್ಟಿದ್ದು, ನ್ಯಾಯಕ್ಕಾಗಿ ಕೈಗೊಂಡಿರುವ ಉಪವಾಸ ಸತ್ಯಾಗ್ರಹ ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ನಿಲಿಸುವುದಿಲ್ಲ ಎಂದು ಜೂನಿಯರ್​ ಡಾಕ್ಟರ್​ಗಳು ಪಟ್ಟುಹಿಡಿದು ಕುಳಿತಿದ್ದಾರೆ. ಈ ಮಧ್ಯೆ ಪ್ರತಿಭಟನಾನಿರತ ವೈದ್ಯರಲ್ಲಿ ಕೆಲವರು ತೀವ್ರ ಅಸ್ವಸ್ಥಗೊಂಡಿದ್ದೇ ಆದರೂ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಕೋಲ್ಕತ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರ ಗುಂಪು, ಇದೀಗ ತಾವು ಕೈಗೊಂಡಿರುವ ಉಪವಾಸ ಸತ್ಯಾಗ್ರಹವನ್ನು ಯಾವ ಅಧಿಕಾರಿಗಳ ಒತ್ತಾಯಕ್ಕೂ ಮಣಿಯದೆ, ಸರ್ಕಾರದ ಭರವಸೆಯ ಮಾತುಗಳಿಗೂ ಕಿವಿಗೊಡದೆ, ನ್ಯಾಯಕ್ಕಾಗಿ ಆಗ್ರಹಿಸುತ ಮುಂದುವರೆಸಿದ್ದಾರೆ. ಆರ್ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕಿರಿಯ ವೈದ್ಯರು ಕೈಗೊಂಡಿರುವ ಈ ಮುಷ್ಕರ ಇಂದಿಗೆ ಹದಿಮೂರನೇ ದಿನಕ್ಕೆ ಕಾಲಿಟ್ಟಿದೆ.

ಚಿಂತಾಜನಕ ಸ್ಥಿತಿ

ವರದಿಗಳ ಪ್ರಕಾರ, ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ವೈದ್ಯರ ಪೈಕಿ ಆರು ಕಿರಿಯ ವೈದ್ಯರು ಇದೀಗ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆ ಪಾಲಾಗಿದ್ದಾರೆ. ತನಯ ಪಂಜಾ, ಅನುಸ್ತುಪ್ ಮುಖೋಪಾಧ್ಯಾಯ ಮತ್ತು ಅನಿಕೇತ್ ಮಹಾತಾವ್ ಸದ್ಯ ಚಿಂತಾಜನಕ ಸ್ಥಿತಿ ತಲುಪಿರುವ ವೈದ್ಯರು ಎಂದು ಹೇಳಲಾಗಿದೆ. ಇಷ್ಟಾದರೂ ಸಹ ಪ್ರತಿಭಟನೆ ಕೈಬಿಡದ ಕಿರಿಯ ವೈದ್ಯರು, ಅತ್ಯಾಚಾರ-ಕೊಲೆಯಲ್ಲಿ ದುರಂತ ಸಾವು ಕಂಡ ಪುತ್ರಿಯನ್ನು ಕಳೆದುಕೊಂಡಿರುವ ಪೋಷಕರಿಗೆ ನ್ಯಾಯ ಸಿಗುವವರೆಗೂ ನಮ್ಮ ಈ ಹೋರಾಟ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ನಮ್ಮ ವೈದ್ಯರಿಗೆ ಏನಾದರೂ ಹೆಚ್ಚು-ಕಡಿಮೆ ಆದಲ್ಲಿ, ಅದಕ್ಕೆ ಮಮತಾ ಬ್ಯಾನರ್ಜಿ ಸರ್ಕಾರವೇ ನೇರ ಹೊಣೆ ಎಂದು ಪ್ರತಿಭಟನಾನಿರತ ವೈದ್ಯರು ಬಂಗಾಳ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net