

ಸಾಗರ: ನಿಸ್ವಾರ್ಥ ಮನೋಭಾವದಿಂದ ದೇವರ ಸೇವೆ ಮಾಡುವುದರಿಂದ ನಮಗೆ ಪ್ರತಿಫಲ ಸಿಗುತ್ತದೆ ಶಿಮುಲ್ ಅಧ್ಯಕ್ಷ ವಿದ್ಯಾಧರ ಹೇಳಿದರು.
ನವರಾತ್ರಿ ಅಂಗವಾಗಿ ಸಾಗರದ ಶಂಕರಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಾಗರ ಪಟ್ಟಣದ 15 ಕಡೆಗಳಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಸ್ಥಾಪಿಸುವ ಉದ್ದೇಶ ಇದ್ದು, ಅರ್ಧ ಕಿ.ಮೀ. ವ್ಯಾಪ್ತಿಗೆ ಒಂದು ಪಾರ್ಲರ್ ಪ್ರಾರಂಭಿಸಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಲಾಗುತ್ತದೆ. ನಂದಿನಿ ಹಾಲು, ಮೊಸರು, ಐಸ್‌ಕ್ರೀಂ, ಸಿಹಿ ಖಾದ್ಯ ಸೇರಿ ಎಲ್ಲ ನಂದಿನಿ ಉತ್ಪನ್ನಗಳು ಒಂದೇ ಕಡೆ ಸಿಗುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸ್ವಂತ ಜಾಗ ಹೊಂದಿದವರು ಮಿಲ್ಕ್ ಪಾರ್ಲರ್ ಆರಂಭಿಸಲು ಶಿಮುಲ್‌ನಲ್ಲಿ ಭೇಟಿ ಮಾಡಬಹುದು. ಶಿವಮೊಗ್ಗ ಹಾಲು ಒಕ್ಕೂಟ ರೈತರ ಸಂಸ್ಥೆಯಾಗಿದ್ದು, ಹಾಲು ಮಾರಾಟ ಹೆಚ್ಚಿಸುವ ಜತೆಗೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿದೆ ಎಂದರು.
ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಮಾತನಾಡಿ, ಸಾಗರ ಶೃಂಗೇರಿ ಶಂಕರಮಠ 25 ವರ್ಷ ಪೂರೈಸಿದ್ದು, ಹನ್ನೊಂದು ವರ್ಷಗಳಿಂದ ಸಾಧಕರನ್ನು ಗುರುತಿಸಿ ಶೃಂಗೇರಿ ಶ್ರೀಗಳ ಮಾರ್ಗದರ್ಶನದಲ್ಲಿ ಶಾರದಾ ಪ್ರಸಾದ ಪುರಸ್ಕಾರ ನೀಡಿ ಗೌರವಿಸುತ್ತಿದೆ.ಬೆಳ್ಳಿಹಬ್ಬದ ಅಂಗವಾಗಿ ಶ್ರೀಮಠಕ್ಕೆ ಸಂಪರ್ಕಿಸುವ ವೃತ್ತಗಳಲ್ಲಿ ಬೃಹತ್ ಮಹಾದ್ವಾರ, ಅರ್ಚಕರಿಗೆ ವಸತಿಗೃಹ, ಬಯಲು ರಂಗಮಂದಿರ ಇತರ ಅಭಿವೃದ್ಧಿ ಕೆಲಸ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು. ಶಶಿಕಲಾ ಮೂರ್ತಿ ಬೆಂಗಳೂರು, ಕೆ.ವಿ.ಜಯರಾಮ್ ಸಾಗರ ಅವರಿಗೆ ಶಾರದಾ ಪ್ರಸಾದ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸವಿತಾ, ಮಾ.ಸ.ನಂಜುಂಡಸ್ವಾಮಿ, ಪ್ರೊ. ಕೆ.ಆರ್.ಕೃಷ್ಣಯ್ಯ ಇತರರಿದ್ದರು.