

ಶಿಕಾರಿಪುರ: ಭಾರತವು ತನ್ನ ಆಧ್ಯಾತ್ಮಿಕ ಶಕ್ತಿಯ ಬಲದಿಂದ ವಿಶ್ವದಲ್ಲಿ ಪ್ರಕಾಶಿಸುತ್ತಿದೆ. ಅಧ್ಯಾತ್ಮ ಚಿಂತನೆಗಳು ನಮ್ಮಲ್ಲಿ ಸದಾ ನವಚೈತನ್ಯ ಮೂಡಿಸುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶ್ರೀ ನಾಮದೇವ ಸಿಂಪಿ ಸಮಾಜ, ಕ್ಷೇಮಾಭಿವೃದ್ಧಿ ಮಂಡಳಿ, ಸಂತ ನಾಮದೇವ ಭವನ ಕಟ್ಟಡ ಸಮಿತಿ ಆಶ್ರಯದಲ್ಲಿ ದೊಡ್ಡಪೇಟೆ ವಿಠ್ಠಲ ರುಖುಮಾಯಿ ದೇವಸ್ಥಾನ ಮತ್ತು ಶ್ರೀ ಬಲಮರಿ ಗಣಪತಿ ದೇವಸ್ಥಾನದ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ನವಚಂಡಿಕ ಯಾಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವರ ಕಾರ್ಯಗಳಿಂದ ಮನಸು ರಾಗದ್ವೇಷದಿಂದ ಮುಕ್ತವಾಗಿ ನಿರ್ಮಲವಾಗುತ್ತದೆ. ಮಠ ಮಂದಿರಗಳು, ದೇವಸ್ಥಾನಗಳು ಈ ಮಣ್ಣಿನ ಸಂಸ್ಕೃತಿ, ಸಂಸ್ಕಾರ, ಪರಂಪರೆಯ ಪ್ರತಿರೂಪಗಳು. ನಾಮದೇವ ಸಿಂಪಿ ಸಮಾಜ ಅತ್ಯಂತ ಸ್ನೇಹಮಯಿ ಮತ್ತು ಆಸ್ತಿಕ ಸಮಾಜ. ಸಂಸದ ಬಿ.ವೈ.ರಾಘವೇಂದ್ರ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ನಾಮದೇವ ಸಿಂಪಿ ಸಮಾಜದ ತಾಲೂಕು ಅಧ್ಯಕ್ಷ ನಾರಾಯಣ ರಾವ್ ಸದರೆ ಮಾತನಾಡಿ, ಅನಾದಿ ಕಾಲದಿಂದಲೂ ಕಷ್ಟದಲ್ಲಿರುವ ಈ ಸಮಾಜ ಇಂದು ಬೇರೆ ಬೇರೆ ಉದ್ಯೋಗಳಲ್ಲಿ ತೊಡಗಿಕೊಂಡು ಉನ್ನತ ಮಟ್ಟದಲ್ಲಿದೆ. ಹಾಗಾಗಿ ಸಮಾಜದವರು ಭವನ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ನಾಮದೇವ ಸಿಂಪಿ ಯುವಕ ಮಂಡಳಿ ಗೌರವಾಧ್ಯಕ್ಷ ವಿಠ್ಠಲ್ ಮಹೇಂದ್ರಕರ್ ಮಾತನಾಡಿ, ಉದ್ಯೋಗದ ಕಾರಣಕ್ಕೆ ಹಲವೆಡೆ ಹಂಚಿ ಹೋಗಿರುವ ನಮ್ಮ ಸಮಾಜದವರು ಒಂದಾಗಿ ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತಸದ ವಿಷಯ. ಸಮಾಜದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಿ ಎಂದು ಹೇಳಿದರು.
ಸಮಾಜದ ಅಧ್ಯಕ್ಷ ನಾರಾಯಣ ಕೋರ್ಪಡೆ, ಮಹಿಳಾ ಘಟಕದ ಅಧ್ಯಕ್ಷೆ ಡಾ. ನಯನಾ ಹೇಮಂತ್ ಬಸ್ಮೆ, ಸಮಾಜದ ಪ್ರಮುಖರಾದ ಶಂಕರನಾರಾಯಣ್ ಕಠಾರೆ, ಕಾಶಿನಾಥ್ ಚೌದರಿ, ನಾಗರಾಜ್ ಮುಳೆ, ಡಿ.ಜಿ.ರಘುನಾಥ್ ಹರಿಹರ, ಕಾಳಪ್ಪ ಬೊಂಗಾಳೆ, ನಾಗರಾಜ್ ಬೊಂಗಾಳೆ, ಹರೀಶ್‌ಕುಮಾರ್ ಇತರರಿದ್ದರು.