Shashi Tharoor | ಮತದಾರರ ಪಟ್ಟಿ ಪರಿಷ್ಕರಣೆ, ಜಿಎಸ್​​ಟಿ ಸುಧಾರಣೆಗೆ ಕಾಂಗ್ರೆಸ್​​ ಸಂಸದ ಶಶಿ ತರೂರ್​​ ಶಭಾಷ್​​!

Shashi Tharoor
Published on

Shashi Tharoor: ಕಾಂಗ್ರೆಸ್ ಸಂಸದ ಶಶಿ ತರೂರ್ ಭಾರತೀಯ ಚುನಾವಣಾ ಆಯೋಗ ನಡೆಸುತ್ತಿರುವ ಬಿಹಾರದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ಬೆಂಬಲ ವ್ಯಕ್ತಪಡಿಸಿದ್ದು, ಸಾರ್ವಜನಿಕರ ವಿಶ್ವಾಸವನ್ನು ಖಚಿತಪಡಿಸಿಕೊಳ್ಳಲು ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದಿದ್ದಾರೆ.

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ತರೂರ್, ಮತದಾರರ ಪಟ್ಟಿಗಳು ಪರಿಪೂರ್ಣವಾಗಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿದ್ದು, ನಕಲಿ ಮತ್ತು ಮೃತ ಮತದಾರರು, ಬೇರೆ ಬೇರೆ ವಿಳಾಸಗಳಲ್ಲಿ ನೋಂದಾಯಿಸಿಕೊಂಡ ಅನೇಕ ಜನರು ಈ ಪಟ್ಟಿಯಲ್ಲಿದ್ದದಾರೆ, ಚುನಾವಣಾ ಆಯೋಗ ಈ ವಿಷಯದಲ್ಲಿ ಬಹಳ ಮುಕ್ತವಾಗಿ ಎದುರಿಸುವುದು ಉತ್ತಮ ನಡೆ. ಆಧುನಿಕ ತಂತ್ರಜ್ಞಾನಗಳಿಂದ ಮತದಾರರ ಪಟ್ಟಿಯನ್ನು ನವೀಕರಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಬಹುದಾಗಿದ್ದು, ಇದು ಹೆಚ್ಚು ಪರಿಣಾಮಕಾರಿ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದರು.

ಅಲ್ಗಾರಿದಮ್‌ಗಳನ್ನು ಬಳಸಿಕೊಂಡು ನಕಲಿ ಮತದಾರರನ್ನು ಗುರುತಿಸಬಹುದು ಮತ್ತು ಇರುವ ಸಮಸ್ಯೆಗಳನ್ನು ಪರಿಹರಿಸಬಹುದು, ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಹಿತದೃಷ್ಟಿಯಿಂದ, ಯಾವುದೇ ಮತದಾರರು ಯಾವುದೇ ಸಂದೇಹವನ್ನು ಹೊಂದಿರಬಾರದು, ಈ ವಿಷಯದಲ್ಲಿ ಅನೇಕ ಸವಾಲುಗಳಿವೆ, ಎಲ್ಲ ವಿಷಯದಲ್ಲೂ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಿಲ್ಲ, ಆದರೆ, ವಿರೋಧ ಪಕ್ಷಗಳು ಕೇಳುವ ಕಾನೂನುಬದ್ಧ ಪ್ರಶ್ನೆಗಳಿಗೆ ಆಯೋಗ ನ್ಯಾಯಯುತ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಎಂದರು.

ಜಿಎಸ್​​ಟಿ ಸುಧಾರಣೆ ಸ್ವಾಗತಿಸಿದ ತರೂರ್​

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಚನೆಯ ಪರಿಷ್ಕರಣೆಗೆ ತರೂರ್​​ ಬೆಂಬಲ ವ್ಯಕ್ತಪಡಿಸಿದ್ದು, ಇದು ನ್ಯಾಯಯುತ ವ್ಯವಸ್ಥೆಯತ್ತ ಪ್ರಮುಖ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅನೇಕ ವರ್ಷಗಳಿಂದ ಇದನ್ನೇ ಹೇಳುತಿತ್ತು, ಈಗ ಇದು ನ್ಯಾಯಯುತ ವ್ಯವಸ್ಥೆಯಾಗಿದೆ ಎಂದರು. ಸರ್ಕಾರವು ಸರಳೀಕೃತ ಎರಡು ಹಂತದ ಜಿಎಸ್‌ಟಿ ವ್ಯವಸ್ಥೆಯನ್ನು ಅನುಮೋದಿಸಿದ್ದು, ಇದು ಶೇ. 5 ಮತ್ತು ಶೇ. 18 ದರಗಳನ್ನು ಹೊಂದಿದ್ದು, ಹಿಂದಿನ ಶೇ. 12 ಮತ್ತು ಶೇ. 28 ಸ್ಲ್ಯಾಬ್‌ಗಳನ್ನು ತೆಗೆದುಹಾಕಿದೆ. ಹೊಸ ರಚನೆಯು ಸೆಪ್ಟೆಂಬರ್ 22 ರ ನವರಾತ್ರಿಯ ಮೊದಲ ದಿನ ಇದು ಜಾರಿಗೆ ಬರಲಿದೆ.

ಬಿಹಾರದಲ್ಲಿ ಇತ್ತೀಚೆಗೆ ನಡೆದ ಎಸ್‌ಐಆರ್ ಪ್ರಕ್ರಿಯೆಯ ಪರಿಣಾಮವಾಗಿ ಆರಂಭಿಕ ಹಂತದಲ್ಲಿ 65 ಲಕ್ಷ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಈ ಪೈಕಿ 25 ಲಕ್ಷ ಹೆಸರುಗಳನ್ನು ವಲಸೆಯ ಕಾರಣದಿಂದಾಗಿ, 22 ಲಕ್ಷ ಹೆಸರುಗಳನ್ನು ಮೃತರೆಂದು, 9.7 ಲಕ್ಷ ಹೆಸರುಗಳನ್ನು ಅವರ ವಿಳಾಸಗಳಲ್ಲಿ ಕಂಡುಬಂದಿಲ್ಲ ಎಂದು ಮತ್ತು ಏಳು ಲಕ್ಷ ಹೆಸರುಗಳನ್ನು ಬಹು ಕ್ಷೇತ್ರಗಳಲ್ಲಿ ನೋಂದಾಯಿಸಿದ್ದಕ್ಕಾಗಿ ತೆಗೆದುಹಾಕಲಾಗಿದೆ.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net