ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿ ಪ್ರಗತಿ ಪರಿಶೀಲನೆ

West Traffic Station
Published on

ಶಿವಮೊಗ್ಗ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಅವರು ಗುರುವಾರ ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಗೆ ಅನಿರೀಕ್ಷಿತ ಭೇಟಿ ನೀಡಿ, ಈವರೆಗೆ ಜಿಲ್ಲೆಯಲ್ಲಿ ಇ-ಚಲನ್ ಮೂಲಕ ವಿಧಿಸಿದ ದಂಡದ ಪಾವತಿಯಲ್ಲಿನ ಪ್ರಗತಿ ಪರಿಶೀಲಿಸಿದರು.

ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ಅಧಿಸೂಚನೆಯಂತೆ ವಿಧಿಸಲಾದ ದಂಡದ ಮೊತ್ತದಲ್ಲಿ ಶೇ.50 ರಿಯಾಯಿತಿ ನೀಡಿದ್ದು, ದಂಡ ಪಾವತಿಸಿದ್ದಲ್ಲಿ ಅಂತಹ ಪ್ರಕರಣಗಳನ್ನು ವಿಲೇ ಮಾಡಲಾಗುತ್ತದೆ. ಹಾಗಾಗಿ ವಾಹನ ಸವಾರರು ಅವಕಾಶ ಸದ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪರಿಶೀಲಿಸಿದರು.

ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಸೆ.13ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿದೆ. ಈ ಯೋಜನೆ ಸೆ.12ರಂದು ಅಂತ್ಯವಾಗಲಿದೆ. ಹಾಗಾಗಿ ವಾಹನ ಸವಾರರು ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಭೇಟಿ ವೇಳೆ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ದೇವರಾಜ್, ಪಿಎಸ್‌ಐ ತಿರುಮಲೇಶ್ ಹಾಜರಿದ್ದರು.

1.09 ಕೋಟಿ ರೂ. ಜಮೆ: ರಾಜ್ಯ ಸರ್ಕಾರ ಶೇ.50ರಷ್ಟು ರಿಯಾಯಿತಿ ನೀಡಿದೆ. ಕೇವಲ 18 ದಿನಕ್ಕೆ ಜಿಲ್ಲೆಯಲ್ಲಿ ಬರೋಬ್ಬರಿ 1.09 ಕೋಟಿ ರೂ. ದಂಡ ಸಂಗ್ರಹವಾಗಿದೆ. ಆ.23ರಿಂದ ಶೇ.50ರಷ್ಟು ದಂಡ ರಿಯಾಯಿತಿ ಚಾಲ್ತಿಯಲ್ಲಿದೆ. ಸೆ.9ರವರೆಗೆ 26,973 ಪ್ರಕರಣಗಳನ್ನು ಇತ್ಯರ್ಥಪಡಿಸಿ 1,09,96,250 ರೂ. ದಂಡ ಸಂಗ್ರಹಿಸಲಾಗಿದೆ.

19.29 ಕೋಟಿ ರೂ. ದಂಡ ಪಾವತಿ ಬಾಕಿ

2023ರ ಆ.28ರಿಂದ 2025ರ ಆ.30ರವರೆಗೆ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 2,94,181 ಪ್ರಕರಣ ದಾಖಲಾಗಿದ್ದು ಅದರ ದಂಡದ ಮೊತ್ತ 23.38 ಕೋಟಿ ರೂ. ಆಗಿದೆ. ಆ ಪೈಕಿ 56,199 ಇ-ಚಲನ್ ಪ್ರಕರಣ ಮುಕ್ತಾಯಗೊಂಡಿದ್ದು 4.09 ಕೋಟಿ ರೂ. ದಂಡ ಪಾವತಿ ಆಗಿದೆ. ದಾಖಲಾದ ಪ್ರಕರಣಗಳ ಪೈಕಿ 2,37,982 ಇ-ಚಲನ್ ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ. ಈ ಮೂಲಕ 19.29 ಕೋಟಿ ರೂ. ದಂಡ ಪಾವತಿ ಬಾಕಿ ಇದೆ ಎಂದು ಇನ್ಸ್‌ಪೆಕ್ಟರ್ ದೇವರಾಜ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net