ಭಾರತ-ಪಾಕ್ ಕದನ ವಿರಾಮ, ಯುದ್ದದ ಗುರಿ-ಉದ್ದೇಶ ಈಡೇರಿದೆಯಾ ಎಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ

minister krishnabairegouda alliged bjp mps drought relief programme koppal visit
KRISHNABAIREGOUDA
Published on

ವಿಜಯಪುರ: ಪಾಕಿಸ್ತಾನದ ವಿರುದ್ಧ ಆರಂಭಿಸಲಾದ ಯುದ್ದದ ಉದ್ದೇಶ ಈಡೇರಿದೆಯೇ? ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.

ಕದನದ ವಿರಾಮ ಘೋಷಿಸುವ ಮುನ್ನ ಗುರಿ ಮತ್ತು ಉದ್ದೇಶ ಈಡೇರಿದೆಯೇ ಎಂಬುದಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ. ಪಾಕಿಸ್ತಾನದ ವಿರುದ್ಧ ಭಾರತ ಕದನ ಘೋಷಣೆ ಮಾಡಿದಾಗ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ಕೊಟ್ಟಿದೆ. ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಬೇಕು ಮತ್ತು ಇನ್ನೊಮ್ಮೆ ದುಸ್ಸಾಹಸಕ್ಕೆ ಕೈಹಾಕಬಾರದು ಎಂಬ ಕಾರಣಕ್ಕೆ ಬೆಂಬಲಿಸಿದ್ದೇವೆ. ಆದರೆ, ಕದನ ವಿರಾಮ ಘೋಷಣೆ ಮಾಡುವಾಗ ಗುರಿ ಮತ್ತು ಉದ್ದೇಶ ಈಡೇರಿದೆಯಾ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಮಂಗಳವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.

ಪಾಕಿಸ್ತಾನಕ್ಕೆ ಏನು ಪಾಠ ಕಲಿಸಿಬೇಕು ಎಂದು ಹೊರಟ್ಟಿದ್ದೇವೆಯೋ ಆ ಪಾಠ ಕಲಿಸಿದ್ದೇವಾ? ಮೂರ‌್ನಾಲ್ಕು ದಿನ ನಾವು ಏನೋ ಪ್ರಯತ್ನ ಮಾಡಿ ಅಲ್ಲಿಗೆ ಬಿಟ್ಟರೆ, ಇದರಿಂದ ಪಾಕಿಸ್ತಾನಕ್ಕೆ ಇನ್ನಷ್ಟು ಇಂಬು ಕೊಟ್ಟಂತೆ ಆಗುತ್ತೇನೋ ಎಂಬ ಅನುಮಾನ ಹುಟ್ಟುತ್ತದೆ. ಹೀಗಾಗಿ ನಮ್ಮ ಆಂತರಿಕ ವಿಷಯದಲ್ಲಿ ಮತ್ತೆ ಬೆರಳು ತೋರಿಸದಂತೆ ಮಾಡುತ್ತೇವೆ ಎಂದು ಹೊರಟು ಹಠಾತ್ ಆಗಿ ಕದನ ವಿರಾಮ ಮಾಡಿದ್ದು ಯಾಕೆ? ಅಮೇರಿಕ ಹೇಳಿದ್ದಕ್ಕೆ ಕದನ ವಿರಾಮ ಘೋಷಿಸಿದ್ದೇವಾ? ಅಮೇರಿಕ ಹೇಳಿದ ಕಾರಣಕ್ಕೆ ಕದನ ವಿರಾಮ ಮಾಡಿದ್ದರೆ ನಮ್ಮ ಸಾರ್ವಭೌಮತ್ವದ ವಿಷಯ ಏನು ಎಂದು ಪ್ರಶ್ನಿಸಿದರು.

ಭಾರತ ಪಾಕಿಸ್ತಾನ ಯುದ್ದದ ವಿಷಯದಲ್ಲಿ ಅಮೇರಿಕ ಮಧ್ಯಸ್ಥಿಕೆ ವಹಿಸುತ್ತೇವೆ ಎಂಬುದೇ ಭಾರತಕ್ಕೆ ದೊಡ್ಡ ಹಿನ್ನಡೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕಾಶ್ಮೀರ ವಿವಾದವು ನಮ್ಮ ಆಂತರಿಕ ವಿಷಯ. ಆದರೆ, ಕಾಶ್ಮೀರ ವಿಷಯದಲ್ಲಿ ಬೇರೆ ದೇಶದವರು ಬಂದು ಪಂಚಾಯಿತಿ ಮಾಡುತ್ತೇವೆ ಎಂದರೆ, ಅಲ್ಲಿಗೆ ಕಾಶ್ಮೀರದ ವಿಷಯ ಪರಿಹಾರವಾಗಿದೆಯೇ ಅಥವಾ ಮತ್ತೆ ಅದನ್ನು ತೆಗೆಯುತ್ತಿದ್ದೇವಾ ಎಂಬ ಪ್ರಶ್ನೆ ಮೂಡುತ್ತದೆ. ಬರೀ ಭಾಷಣ ಮಾಡಿದರೆ, ಉತ್ತರ ಸಿಗುವುದಿಲ್ಲ. ಕೇಂದ್ರ ಸರ್ಕಾರ ಈ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಕೊಡಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net