ಉಡುಪಿ: ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 90ರ ದಶಕದಲ್ಲಿ 9 ಗ್ರಾಮಗಳಲ್ಲಿ ವಸತಿ ಬಡಾವಣೆಯಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಜಾಗ ಖರೀದಿಸಿದ್ದರು. ಉಪನೋಂದಣಿ ಕಚೇರಿಯಲ್ಲಿ ಆಯಾ ಮಾಲೀಕರ ಹೆಸರಿಗೆ ನೋಂದಣಿಯೂ ಆಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷೃದಿಂದ 9/11 ಹಕ್ಕುಪತ್ರ ದೊರೆಯದೆ ನಿವೇಶನಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ಈ ಬಗ್ಗೆ ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿವೇಶನ ಸಂತ್ರಸ್ತ ದೇವು ಹಾನೇಹಳ್ಳಿ, ಕರ್ನಾಟಕ ಸರ್ಕಾರ 1984ರ ಕಾಯ್ದೆ ಪ್ರಕಾರ ಭೂ ಪರಿವರ್ತನೆ ಮಾಡುವಾಗ ವಸತಿ ಬಡಾವಣೆಗಳಲ್ಲಿ ಸಮುದಾಯಕ್ಕೆ ಜಾಗ ಮೀಸಲಿಡಬೇಕು. 90ರ ದಶಕದಲ್ಲಿ ಉಡುಪಿಯಲ್ಲಿ ಈ ನಿಯಮಗಳನ್ನು ಉಲ್ಲಂಘಿಸಿ ಬಡಾವಣೆಗಳನ್ನು ರೂಪಿಸಿ, ನಿವೇಶನಗಳನ್ನು ಮಾರಾಟ ಮಾಡಲು ಕಂದಾಯ ಇಲಾಖೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದರು. ನಂತರ ಮನೆಕಟ್ಟಲು ಪ್ರಾರಂಭಿಸಿದಾಗ ಇವರ ಅಕ್ರಮಗಳು ಬಯಲಿಗೆ ಬಂದಿದ್ದು, 15-20 ವರ್ಷದಿಂದ ಕಾನೂನು ತೊಡಕಿನಿಂದ ಜಾಗವನ್ನೂ ಏನೂ ಮಾಡಲಾಗದ ಪರಿಸ್ಥಿತಿ ಉದ್ಭವಿಸಿದೆ ಎಂದು ಅಳಲುತೋಡಿಕೊಂಡರು.
7 ಸಾವಿರ ಅಕ್ರಮ ಸಕ್ರಮ ಅರ್ಜಿ
ರಾಜ್ಯ ಸರ್ಕಾರ 2008ರಲ್ಲಿ ಅಕ್ರಮ-ಸಕ್ರಮದಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ್ದರಿಂದ ದಂಡಕಟ್ಟಿ ನಿಮಯಮಾನುಸಾರ ಜಾಗ ಪಡೆದುಕೊಳ್ಳಿ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಸೂಚಿಸಿದ್ದು, ಅದರಂತೆ ಸುಮಾರು 7 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೂ ನ್ಯಾಯ ಮರೀಚಿಕೆಯಾಗಿದೆ ಎಂದರು.
ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ
ಬೆಂಗಳೂರಿನ ಬಿಡಿಎ ನಿವೇಶನ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಉಡುಪಿಯ ಜಾಗದ ಸಮಸ್ಯೆಯೂ ಜತೆಗೆ ಸೇರಿಸಿದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಇದರಿಂದ ಅಧಿಕಾರಿಗಳು ಪ್ರಕರಣ ಕೋರ್ಟ್‌ನಲ್ಲಿದೆ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ನೋಂದಣಿ ಸಂದರ್ಭದಲ್ಲೇ ನಿವೇಶನ ಕಾನೂನು ಬದ್ಧವಾಗಿಲ್ಲವೆಂದು ಕಂದಾಯ ಇಲಾಖೆ ಅರ್ಜಿ ತಿರಸ್ಕರಿಸಿದ್ದರೆ ಈ ಸಮಸ್ಯೆಯೇ ಎದುರಾಗುತ್ತಿರಲಿಲ್ಲ ಎಂದು ಅವರು ಹೇಳಿದರು.
ನಟ ರವಿ ಭಟ್, ವಕೀಲ ತಾರನಾಥ್ ಮಾತನಾಡಿದರು. ಮೆಲ್ವಿನ್, ರಾಬರ್ಟ್ ಉಪಸ್ಥಿತರಿದ್ದರು.