

ಬೆಂಗಳೂರು: ಕಂದಾಯ ಇಲಾಖೆ ಅಧಿಕಾರಿಗಳು ಕಚೇರಿ ವೇಳೆ ಸಂತೆ ಬೀದಿಗಳಲ್ಲಿ ಓಡಾಟ, ಕಾಲಹರಣ, ಗಂಟೆಗಟ್ಟಲೆ ಟೀ/ಕಾಫಿ/ಉಪಹಾರಕ್ಕೆಂದು ಕಚೇರಿ ಬಿಟ್ಟು ಹೋಗುತ್ತಾರೆಯೆ?
ಹೌದು, ಇದು ದೂರೂ ಅಲ್ಲ, ಬೇರಾರೋ ಗಮನಿಸಿರುವುದೂ ಅಲ್ಲ, ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಗಮನಕ್ಕೆ ಬಂದಿದು ಹಾಗೂ ಇದನ್ನು ಅವರೇ ಹೇಳಿರುವುದು!
ಹಲವಾರು ಬಾರಿ ಕಂದಾಯ ಇಲಾಖೆಯ ಅಧೀನ ಶಾಖೆಗಳಿಗೆ ನಾನು ಖುದ್ದಾಗಿ ಪೂರ್ವಾಹ್ನ 10.45ಕ್ಕೆ ತಪಾಸಣೆಗೆಂದು ಭೇಟಿ ನೀಡಿದಾಗಲೆಲ್ಲ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕರ್ತವ್ಯಕ್ಕೆ ಇನ್ನೂ ಹಾಜರಾಗದೇ ಇರುವುದು, ಅಲ್ಲದೇ ಸಾಯಂಕಾಲ ಕಚೇರಿ ತುರ್ತು ಕೆಲಸ ನಿರ್ವಹಣೆಗಾಗಿ ಸಿಬ್ಬಂದಿಗಳನ್ನು ಕರೆದಾಗಲೂ ಕಚೇರಿಯಿಂದ ಅತಿ ಬೇಗ ನಿರ್ಗಮಿಸಿರುವುದು ಕಂಡು ಬಂದಿರುತ್ತದೆ. ಇದರಿಂದಾಗಿ ಕಚೇರಿ ಕೆಲಸಕ್ಕೆ ಅಡಚಣೆಯುಂಟಾಗುತ್ತಿರುತ್ತದೆ.
ಅಲ್ಲದೇ, ಕಚೇರಿ ವೇಳೆಯಲ್ಲಿ ಸಾರ್ವಜನಿಕರು ಟಪಾಲು/ಕಡತ ಚಲನವಲನ ವಿಚಾರಣೆಗಾಗಿ ಬಂದಾಗ ವಿನಾಕಾರಣ ಅವರೊಂದಿಗೆ ಕಾಲಹರಣ ಮಾಡುತ್ತಿರುವುದು, ಗಂಟೆಗಟ್ಟಲೆ ಟೀ/ಕಾಫಿ/ಉಪಹಾರಕ್ಕೆಂದು ಗಂಟೆಗಟ್ಟಲೆ ಕಚೇರಿ ಬಿಟ್ಟು ಹೋಗುತ್ತಿರುವುದು ನನ್ನ ಗಮನಕ್ಕೆ ಬಂದಿವೆ. ಇನ್ನು ಮುಂದೆ ಈ ರೀತಿ ಪುನರಾವರ್ತನೆಯಾದಲ್ಲಿ ಅಂತಹ ನೌಕರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಕಂದಾಯ ಇಲಾಖೆಯ ಎಲ್ಲ ನೌಕಕರು ಪ್ರತಿ ದಿನ ಕಚೇರಿಗೆ 10.30 ರೊಳಗಾಗಿ ಕಡ್ಡಾಯವಾಗಿ ಹಾಜರಿರುವುದು. ಸಂಜೆ ಕಚೇರಿಯಿಂದ ತೆರಳುವಾಗ ತಮ್ಮ ಶಾಖೆಯ ಸಂಬಂಧಪಟ್ಟ, ಜಂಟಿ/ಉಪ ಕಾರ್ಯದರ್ಶಿಯವರ ಅನುಮತಿ ಪಡೆದ ತೆರಳಬೇಕು. ಈ ಸೂಚನೆಗಳನ್ನು ಕಂದಾಯ ಇಲಾಖೆಯ ಎಲ್ಲ ನೌಕರರು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಅವರ ಮೇಲೆ ಸೂಕ್ತ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.