21 ರಂದು ದೊಡ್ಡಕವಲಂದೆಯಲ್ಲಿ ಕಂದಾಯ ಅದಾಲತ್

Published on

ನಂಜನಗೂಡು: ದೊಡ್ಡ ಕವಲಂದೆ ಹೋಬಳಿ ಮಟ್ಟದ ಕಂದಾಯ ಅದಾಲತ್ ಇದೇ ಜುಲೈ 21 ರಂದು ನಡೆಯಲಿದೆ ಎಂದು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ತಿಳಿಸಿದರು.

ಕಂದಾಯ ಇಲಾಖೆ, ತಹಸೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯ ನಂಜನಗೂಡು, ದೊಡ್ಡ ಕವಲಂದೆ ಉಪ ತಹಸೀಲ್ದಾರ್ ಕಾರ್ಯಾಲಯ ವತಿಯಿಂದ ಆಯೋಜಿಸಲಾಗಿರುವ ಕಂದಾಯ ಅದಾಲತ್, ಪಿಂಚಣಿ ಅದಾಲತ್, ಇ-ಪೌತಿ ಖಾತೆ ಅದಾಲತ್ ಹಾಗೂ ಜನಸಂಪರ್ಕ ಸಭೆಯನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜು.21 ರಂದು ಬೆಳಿಗ್ಗೆ 11 ಗಂಟೆಗೆ ದೊಡ್ಡಕವಲಂದೆ ಗ್ರಾಮದ ಶಾದಿ ಮಹಲ್‌ನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದಾಲತ್ ಕಾರ್ಯಕ್ರಮದಲ್ಲಿ ಆರ್‌ಟಿಸಿ ಒಟ್ಟುಗೂಡಿಸುವುದು. ಎಂ.ಆರ್.ನಂತೆ ಪಹಣಿ ತಿದ್ದುಪಡಿ ಹಾಗೂ ಇಂಡೀಕರಣ, ಪೋಡಿಯಂ ಆರ್‌ಟಿಸಿ ಇಂಡೀಕರಣ, ಆರ್‌ಟಿಸಿಯಲ್ಲಿ ಹೆಸರು ತಿದ್ದುಪಡಿ, ಆಕಾರ್ ಬಂದ್‌ನಂತೆ ಆರ್‌ಟಿಸಿ ತಿದ್ದುಪಡಿ, ಆರ್‌ಟಿಸಿ ಕಾಲಂ 12(2) ರಲ್ಲಿ ಎಂ.ಆರ್.ನಂತೆ ಹೆಸರು ತಿದ್ದುಪಡಿ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮೈತ್ರಿ ಹಾಗೂ ಮನಸ್ವಿನಿ ಪಿಂಚಣಿಗಳ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗುತ್ತದೆ ಎಂದು ವಿವರಿಸಿದರು.

ಸಾಮಾಜಿಕ ಯೋಜನೆ ಪಿಂಚಣಿಗೆ ಸಂಬಂಧಿಸಿದಂತೆ ನಿಗಧಿಪಡಿಸಿರುವ ನಮೂನೆ-1, ಫೋಟೋ, ಬ್ಯಾಂಕ್ ಪಾಸ್‌ಬುಕ್, ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್ ಕಾರ್ಡ್, ಆದಾಯ ವರಮಾನ ಪತ್ರ, ಶಾಲಾ ದಾಖಲಾತಿ, ವೈದ್ಯಕೀಯ ಪತ್ರವನ್ನು ಸಲ್ಲಿಸಬೇಕು. ಯಾವುದೇ ಸೌಲಭ್ಯಗಳನ್ನು ನೀವು ಪಡೆಯಬೇಕಾದಲ್ಲಿ ನಿಮ್ಮ ಜಮೀನಿನ ಎಲ್ಲ ದಾಖಲೆಗಳನ್ನು ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು. ದೊಡ್ಡಕವಲಂದೆ ಹೋಬಳಿಯ ರೈತರು ಇದರ ಸದುಪಯೋಗಪಡಿಸಿಕೊಂಡು ನಿಮ್ಮ ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net