

ಶಿಕಾರಿಪುರ: ಶರಣ ತತ್ವದ ಸಾಕ್ಷಿರೂಪವಾಗಿದ್ದ ದೇವರ ದಾಸಿಮಯ್ಯ ವಚನಗಳ ಮೂಲಕ ಜನರಿಗೆ ವಾಸ್ತವ ಬದುಕಿನ ಅವಲೋಕನ ಮಾಡಿಸಿದ ಆದ್ಯ ವಚನಕಾರ ಎಂದು ಉಪನ್ಯಾಸಕ ಕೆ.ಎಚ್.ಪುಟ್ಟಪ್ಪ ಹೇಳಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ಬದುಕಿನುದ್ದಕ್ಕೂ ಸಾಮಾಜಿಕ ಕಳಕಳಿಯನ್ನೇ ಉಸಿರಾಗಿಸಿಕೊಂಡಿದ್ದರು. ಸಮಾಜದ ಅಂಕುಡೊಂಕುಗಳನ್ನು ವಚನಗಳ ಮೂಲಕ ತಿದ್ದಿದವರು ದೇವರ ದಾಸಿಮಯ್ಯ. ಅವರ ಪ್ರತಿ ವಚನವೂ ಒಂದು ಗ್ರಂಥವಿದ್ದಂತೆ ಎಂದರು.
ದೇವರ ದಾಸಿಮಯ್ಯ ಬಸವಾದಿ ಶಿವಶರಣರಿಗಿಂತಲೂ ಹಿರಿಯ ವಚನಕಾರ, ಅನುಭಾವಿ. ವಚನಗಳ ಮೂಲಕ ಸಮಾಜ ಸುಧಾರಕನಾಗಿ, ಮಾನವೀಯ ಮೌಲ್ಯಗಳ ಪ್ರತಿಪಾದಕನಾಗಿ ಬಸವಾದಿ ಶಿವಶರಣರ ಮೇಲೆ ಪ್ರಭಾವ ಬೀರಿದವರು. ವಚನ ಸಾಹಿತ್ಯದ ಸಮೃದ್ಧಿಗೆ ನೆಲವನ್ನು ಹದ ಮಾಡಿ, ಬೀಜಬಿತ್ತಿ ನೀರೆರೆದು ಪೋಷಿಸಿ ಆದ್ಯ ವಚನಕಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಬಣ್ಣಿಸಿದರು.
ಬಸವಣ್ಣನಗಿಂತಲೂ ಹಿರಿಯರಾದ ದಾಸಿಮಯ್ಯ ನೇಯ್ಗೆಯನ್ನೇ ಕಾಯಕ ಮಾಡಿಕೊಂಡವರು. ನೇಕಾರ ಸಮಾಜದ ಅಸ್ಮಿತೆ, ಆತ್ಮಾಭಿಮಾನವನ್ನು ಎತ್ತಿ ಹಿಡಿದವರು. ವಚನ ಸಾಹಿತ್ಯದ ಪರಂಪರೆ ದಾಸಿಮಯ್ಯನಿಂದಲೇ ಆರಂಭವಾಯಿತು ಎಂದರು.
ಶಿರಸ್ತೇದಾರ್ ವಿನಯ್ ಎಂ. ಆರಾಧ್ಯ ಮಾತನಾಡಿ, ದೇವರ ದಾಸಿಮಯ್ಯ ಅವರ ಬದುಕು, ನಡೆ-ನುಡಿ ಅನುಕರಣೀಯ. ಅವರ ಪ್ರತಿಯೊಂದು ವಚನಗಳು ನಮ್ಮನ್ನು ವಿಮರ್ಶೆಗೆ ಒಳಪಡಿಸುತ್ತವೆ. ಮಾನವೀಯ ಮೌಲ್ಯಗಳು ಸೃಜಿಸುವಂತೆ ಮಾಡುತ್ತವೆ. ವಚನಕಾರನ ಸ್ಮರಣೆ ಮಾಡುವುದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ತಿಳಿಸಿದರು.
ದೇವರ ದಾಸಿಮಯ್ಯ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಟಿ.ಕರಿಬಸಪ್ಪ, ಪುರಸಭೆ ಕಚೇರಿ ವ್ಯವಸ್ಥಾಪಕ ರಾಜಕುಮಾರ್, ತಾಲೂಕು ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ರುದ್ರಪ್ಪ, ಸಮಾಜದ ಮುಖಂಡರಾದ ಕರಿಬಸಪ್ಪ ಸಾಲೇಶ್ವರ, ಸತ್ಯನಾರಾಯಣ, ಕೊಟ್ರೇಶಪ್ಪ, ಪರಮೇಶಪ್ಪ, ಹರೀಶ್, ಪ್ರಕಾಶ್, ಚುನಾವಣಾ ಶಾಖೆ ಶಿರಸ್ತೇದಾರ್ ಸುಧೀರ್ ಇತರರಿದ್ದರು.