ಜೈಲಿನಿಂದ ಬಿಡುಗಡೆ ಕೂಡಲೇ ದೇವೇಗೌಡರ ಮನೆಗೆ ರೇವಣ್ಣ; ತಬ್ಬಿಕೊಂಡು ಬರ ಮಾಡಿಕೊಂಡ ಕುಮಾರಸ್ವಾಮಿ

HD Revanna
Published on

ಬೆಂಗಳೂರು: ಕಿಡ್ನ್ಯಾಪ್ ಪ್ರಕರಣದಲ್ಲಿ ಬೇಲ್ ಪಡೆದು ಜೈಲಿನಿಂದ ಹೊರ ಬಂದ ಮಾಜಿ ಸಚಿವ ಎಚ್.ಡಿ.ರೇವಣ್ಣ

ನೇರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಗೆ ಬಂದು ತಂದೆ-ತಾಯಿ ಕಾಲಿಗೆ ಬಿದ್ದು, ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ದೇವೇಗೌಡರು ಭಾವುಕರಾಗಿದ್ದರು. ಸಹೋದರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ರೇವಣ್ಣ ಮನೆಗೆ ಎಂಟ್ರಿ ಆಗುತ್ತಲೇ ತಬ್ಬಿಕೊಂಡು ಸಂತೈಸಿದರು. ಕುಟುಂಬದವರನ್ನು ನೋಡುತ್ತಲೇ ರೇವಣ್ಣ ಕಣ್ಣೀರು ಹಾಕಿದರು.

10 ದಿನದ ಹಿಂದೆ ದೇವೇಗೌಡರ ನಿವಾಸದಲ್ಲೇ ಎಸ್‌ಐಟಿಯಿಂದ ಬಂಧನಕ್ಕೆ ಒಳಗಾದ ರೇವಣ್ಣ ಜೈಲಿನಿಂದ ನೇರವಾಗಿ ಬಂಧನವಾದ ಸ್ಥಳಕ್ಕೆ ಬಂದರು. ಮನೆಯಲ್ಲಿ ದೇವೇಗೌಡ, ಕುಮಾರಸ್ವಾಮಿ ಮತ್ತು ರೇವಣ್ಣ ಸುಮಾರು 45 ನಿಮಿಷ ಕಾಲ ಸುದೀರ್ಘವಾಗಿ ಚರ್ಚಿಸಿದರು.

ಮಂಕಾಗಿದ್ದ ಮನೆಯಲ್ಲಿ ಸಡಗರ

ರೇವಣ್ಣ ಮನೆಗೆ ವಾಪಸ್ ಬರುತ್ತಲೇ ದೇವೇಗೌಡರ ಮನೆಯಲ್ಲಿ ಒಂದು ಬಗೆಯ ಸಡಗರ ಕಂಡುಬಂತು. ಪ್ರತಿಯೊಬ್ಬರೂ ರೇವಣ್ಣ ಆರೋಗ್ಯ ವಿಚಾರಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಆದರೆ, ಈ ಸಂದರ್ಭದಲ್ಲಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಇರಲಿಲ್ಲ.

ಮನೆ ಹೊರಗೆ ಕಾರ್ಯಕರ್ತರ ಜೈಕಾರ

ರೇವಣ್ಣ ಜೈಲಿನಿಂದ ಹೊರ ಬರುತ್ತಲೇ ಹಾಸನ, ಹೊಳೆನರಸೀಪುರದಿಂದ ಆಗಮಿಸಿದ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಬಳಿಕ ದೇವೇಗೌಡರ ಮನೆ ಮುಂದೆಯೂ ನೂರಾರು ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಗಂಟೆ ಗಟ್ಟಲೆ ರೇವಣ್ಣ ಅವರಿಗಾಗಿ ಕಾದು ನಿಂತಿದ್ದರು. ಬಳಿಕ ಹೊರ ಬಂದ ರೇವಣ್ಣ ಕಾರ್ಯಕರ್ತರ ಕಡೆಗೆ ಕೈಬೀಸಿದರು. ಪ್ರಮುಖ ಮುಖಂಡರನ್ನು ಮಾತನಾಡಿಸಿದರು. ತರುವಾಯ ಜೆ.ಪಿ.ನಗರದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ರೇವಣ್ಣಗೆ ಕುಟುಂಬದ ಕಿವಿ ಮಾತು

ಜೈಲಿನಿಂದ ಬಂದ ರೇವಣ್ಣ ಜತೆ ತಂದೆ ದೇವೇಗೌಡ ಹಾಗೂ ಸಹೋದರ ಕುಮಾರಸ್ವಾಮಿ ಸುದೀರ್ಘ ಚರ್ಚೆ ನಡೆಸಿ ಎಸ್‌ಐಟಿ ತನಿಖೆ ಹಿಂದೆ ಯಾರಿದ್ದಾರೆ? ನಮ್ಮ ಕುಟುಂಬವನ್ನು ಹಣಿಯವು ಷಢ್ಯಂತ್ರ ನಡೆಯುತ್ತಿದೆ. ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ. ರೇವಣ್ಣ ನಿನ್ನ ಮೇಲೆ ಸರ್ಕಾರ ಕಣ್ಣಿಟ್ಟಿದೆ. ನೀನು ಎಚ್ಚರಿಕೆಯಿಂದಿರಬೇಕು ಎಂದು ಕಿವಿ ಮಾತು ಹೇಳಿದರಲ್ಲದೆ, ಈ ಪ್ರಕರಣವನ್ನು ನಾವು ಒಗ್ಗಟ್ಟಾಗಿ ಹೇಗೆ ಎದುರಿಸಬೇಕು? ನಮ್ಮ ಕುಟುಂಬದ ವಿರುದ್ಧ ನಡೆಯುತ್ತಿರುವ ಷಢ್ಯಂತ್ರಕ್ಕೆ ಪ್ರತಿತಂತ್ರ ಹೇಗೆ ಹೂಡಬೇಕು ಎಂಬ ಕುರಿತು ಚರ್ಚಿಸಿದರು ಎನ್ನಲಾಗಿದೆ.

ವಿಚಲಿತರಾಗುವುದು ಬೇಡ

ನಾವ್ಯಾರೂ ಪ್ರಕರಣದಿಂದ ವಿಚಲಿತರಾಗುವುದು ಬೇಡ. ಕಾನೂನು ಹೋರಾಟ ಮಾಡೋಣ. ಕಾಂಗ್ರೆಸ್ ನಾಯಕರ ಕುತಂತ್ರಕ್ಕೆ ಪ್ರತ್ಯುತ್ತರ ಕೊಡೋಣ. ಸ್ವಲ್ಪ ಎಚ್ಚರಿಕೆಯಿಂದರಿಬೇಕು ಎಂದು ದೇವೇಗೌಡ, ಕುಮಾರಸ್ವಾಮಿ ಅವರು ರೇವಣ್ಣ ಅವರಿಗೆ ಕಿವಿ ಮಾತು ಹೇಳಿದ್ದಾರೆ.

ಈ ಪ್ರಕರಣದ ರಾಜಕೀಯ ಲಾಭ ಪಡೆಯಲು ‘ಮಹಾನಾಯಕ’ ಕುತಂತ್ರ ಮಾಡುತ್ತಿದ್ದಾರೆ.

ನಿನ್ನ ಹಾಗೂ ನಿನ್ನ ಕುಟುಂಬದ ಪ್ರತಿ ನಡೆ ಗಮನಿಸುತ್ತಿರುತ್ತಾರೆ. ಹಾಗಾಗಿ ಎಚ್ಚರಿಕೆಯಿಂದಿರು. ರಾಜಕೀಯ ಷಢ್ಯಂತ್ರಕ್ಕೆ ನಾವು ಬಲಿಯಾಗಬಾರದು ಎಂದು ರೇವಣ್ಣಗೆ ತಿಳಿವಳಿಕೆ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಕಾರ್ಯಕರ್ತರನ್ನು ಕಂಡು ಗಳಗಳನೆ ಅತ್ತ ರೇವಣ್ಣ

ದೇವೇಗೌಡರ ಪದ್ಮನಾಭನಗರದ ನಿವಾಸದ ಎದುರು ರೇವಣ್ಣಗಾಗಿ ನೂರಾರು ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಕಾದು ನಿಂತಿದ್ದರು. ರೇವಣ್ಣ ಬಂದ ಕೂಡಲೇ ಅವರಿಗೆ ಹಸ್ತಲಾಘವ ನೀಡಲು ಮುಗಿಬಿದ್ದರು. ನಾವು ನಿಮ್ಮ ಜತೆ ಇರುತ್ತೇವೆ. ನೀವು ಧೈರ್ಯಗೆಡೆಬೇಡಿ ಎಂದು ಕಾರ್ಯಕರ್ತರು ರೇವಣ್ಣಗೆ ವಿಶ್ವಾಸ ತುಂಬಿದರು. ಆಗ ರೇವಣ್ಣ ಗಳಗಳನೆ ಅತ್ತರು.

ಪಟಾಕಿ ಸಿಡಿಸಿ ಸಂಭ್ರಮಿಸುವ ಸಮಯ ಇದಲ್ಲ

ರಾಜ್ಯದಲ್ಲಿ ಅತ್ಯಂತ ಹೀನಾಯ ಘಟನೆ ನಡೆದಿದೆ. ರೇವಣ್ಣ ಕೂಡ ಆರೋಪ ಎದುರಿಸಬೇಕಾಯಿತು. ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಇದು ಪಟಾಕಿ ಸಿಡಿಸಿ ಸಂತೋಷಪಡುವ ಸಮಯ ಅಲ್ಲ. ಇಡೀ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾದಾಗ ಸಂಭ್ರಮಿಸಿ. ಈ ಘಟನೆ ರಾಜ್ಯವೇ ತಲೆ ತಗ್ಗಿಸುವಂತಹ ಘಟನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಹಾಸನ, ಹೊಳೆನರಸೀಪುರಕ್ಕೆ ಭೇಟಿ

ಜೈಲಿನಿಂದ ಬಿಡುಗಡೆಯಾದ ರೇವಣ್ಣ ಬುಧವಾರ ಹಾಸನ, ಹೊಳೆನರಸೀಪುರಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ. ಹಾಸನ ಹಾಗೂ ಹೊಳೆನರಸೀಪುರದಲ್ಲಿ ರೇವಣ್ಣ ಸ್ವಾಗತಕ್ಕೆ ಕಾರ್ಯಕರ್ತರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹೊಳೆನರಸೀಪುರಕ್ಕೆ ಆಗಮಿಸುತ್ತಲೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲು ತಯಾರಿ ನಡೆಸಿದ್ದಾರೆ. ಹಾಸನ, ಹೊಳೆನರಸೀಪುರದಲ್ಲಿ ರೇವಣ್ಣ ಬುಧವಾರ ಟೆಂಪಲ್‌ರನ್ನ ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net