ರೆಟ್ರೋ ಗಣೇಶ: 80 ರ ದಶಕದ ಗಣೇಶೋತ್ಸವದ ಫ್ಲ್ಯಾಶ್​ಬ್ಯಾಕ್​!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಸಾಮಾಜಿಕ ಜಾಲತಾಣದ ತುಂಬೆಲ್ಲ ಈಗ 1980ರ ದಶಕದ ಫೋಟೋಗಳದ್ದೇ ಟ್ರೆಂಡ್. ಎಂಬತ್ತರ ದಶಕದಲ್ಲಿ ಹೇಗೆಲ್ಲ ಇದ್ದೆವು ಎಂಬ ಕುತೂಹಲವೇ ಇದಕ್ಕೆ ಕಾರಣ. ಹಳೆಯದಾದರೂ ಇಂದಿಗೂ ಆಕರ್ಷಕವಾಗಿ ಕಾಣುವ ನೆನಪುಗಳು ಮನಸ್ಸಿಗೆ ಮುದ ನೀಡುತ್ತವೆ. ಅದೇ ರೀತಿ ಗಣೇಶನ ರೂಪ ಹಾಗೂ ಗಣೇಶೋತ್ಸವದ ನೆನಪುಗಳು ಕೂಡ. ಸಾರ್ವಜನಿಕ ಗಣೇಶೋತ್ಸವಗಳು ವರ್ಷದಿಂದ ವರ್ಷಕ್ಕೆ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದ್ದರೂ, 80ರ ದಶಕದ ಆ ಉತ್ಸವಗಳ ಶಕ್ತಿಯೇ ಅಸಾಧಾರಣ. ತಂತ್ರಜ್ಞಾನ ಆಗಷ್ಟೇ ದಾಪುಗಾಲಿಡುತ್ತಿದ್ದ ಆ ಕಾಲದಲ್ಲಿ ಗಣೇಶನನ್ನು ಬರಮಾಡಿಕೊಳ್ಳುವ, ಕಾರ್ಯಕ್ರಮಗಳನ್ನು ನಡೆಸುವ ಶೈಲಿ ಆಪ್ತವಾಗಿತ್ತು. ರಾಜ್ಯದಲ್ಲಿ ಆ ದಿನಗಳಲ್ಲಿ, ಅಂದರೆ 80ರ ದಶಕದಲ್ಲಿ ಮಂಡಳಿಗಳು ಗಣೇಶೋತ್ಸವಗಳನ್ನು ಹೇಗೆ ಆಚರಿಸುತ್ತಿದ್ದವು, ಸಂಭ್ರಮ ಹೇಗಿರುತ್ತಿತ್ತು... ಬನ್ನಿ, ಒಮ್ಮೆ ಆ ನೆನಪಿನ ದೋಣಿಯಲ್ಲಿ ವಿಹರಿಸೋಣ. ರೆಟ್ರೋದಿಂದ ಹೊಸ ದೃಷ್ಟಿಕೋನವನ್ನು ಪಡೆದು, ವರ್ತಮಾನವನ್ನು ಇನ್ನಷ್ಟು ಚೆಂದವಾಗಿಸೋಣ.

ಪೌರಾಣಿಕ ಪಯಣ

ವೈಭವೋಪೇತ ಅಲಂಕಾರ, ಗಗನಚುಂಬಿ ಮೂರ್ತಿ ಕೂರಿಸುವ ಬದಲಾಗಿ ಧಾರ್ವಿುಕ ಚಿಂತನೆಯ ಒಲವು ಮೂಡಿಸುವತ್ತ ದಾವಣಗೆರೆ ಮಂಡಿಪೇಟೆಯ ಸ್ವಸ್ತಿಕ್ ಗ್ರೂಪ್ 52 ವರ್ಷದಿಂದ ವಿಶಿಷ್ಟವಾಗಿ ಗಣೇಶೋತ್ಸವ ಆಚರಿಸುತ್ತಿದೆ. ತಂತ್ರಜ್ಞಾನದ ಅಬ್ಬರವಿಲ್ಲದ ರೆಟ್ರೋ ಕಾಲದಲ್ಲಿ ಮಣ್ಣಿನ ಬೊಂಬೆಗಳನ್ನು ತಯಾರಿಸಿ ಚಲಿಸುವ ಪರಿಕಲ್ಪನೆ, ಹಿನ್ನೆಲೆ ಧ್ವನಿ ಕಲ್ಪಿಸಿ ಎಂಟು-ಹತ್ತು ನಿಮಿಷದಲ್ಲೇ ಪೌರಾಣಿಕ ಕಥಾನಕಗಳನ್ನು ಬಿತ್ತರಿಸಿ ಜನಮಾನಸ ತಲುಪಿಸುವ ಪ್ರಯತ್ನವನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಇದಕ್ಕೆಂದೇ ಬರುತ್ತಿದ್ದ ಮೈಸೂರು, ಶಿವಮೊಗ್ಗದ ಕಲಾವಿದರು ಮೂರು ತಿಂಗಳು ಠಿಕಾಣಿ ಹೂಡುತ್ತಿದ್ದುದು ವಿಶೇಷ!. ವಾಮನ ಅವತಾರ, ಗೋವರ್ಧನ ಗಿರಿ ಎತ್ತಿಹಿಡಿವ ಪವಾಡ, ವಸುದೇವ ನಂದನ, ಗೋಕರ್ಣದ ಆತ್ಮಲಿಂಗ... ಹೀಗೆ ನಾನಾ ಕಥೆಗಳ ಪ್ರಸ್ತುತಿ ಆಗುತ್ತಿತ್ತು. ಮಧ್ಯರಾತ್ರಿಯವರೆಗೂ ನಡೆಯುತ್ತಿದ್ದ ಪ್ರದರ್ಶನ ವೀಕ್ಷಿಸಲು ಸಾವಿರಾರು ಜನರು ಸೇರುತ್ತಿದ್ದರು. ಶತಮಾನದಷ್ಟು ಪುರಾತನವಾದ ಕೋದಂಡರಾಮನ ದೇಗುಲದಲ್ಲೇ ಈಗ ಗಣೇಶೋತ್ಸವ ಜರುಗುತ್ತಿದೆ. ಎ.ಜಿ.ಮಂಜುನಾಥ, ಸಿ.ಎ.ಶಿವರಾಂ, ಮಾಕನೂರು ಶ್ರೀಧರ್, ಚಂದ್ರಶೇಖರ್ ಎಂಬ ನಾಲ್ವರು ಸ್ನೇಹಿತರು ಚಟುವಟಿಕೆಯಿಲ್ಲದ ದೇಗುಲದ ಕಳೆ ಹೆಚ್ಚಿಸಲು ಕಂಡುಕೊಂಡ ಉಪಾಯವೇ ಗಣೇಶೋತ್ಸವ. ಈಗ ಅವರ ಮಕ್ಕಳು ಈ ಉತ್ಸವದ ನೊಗ ಹೊತ್ತಿದ್ದಾರೆ.

ತುರ್ತು ಪರಿಸ್ಥಿತಿಯಲ್ಲೂ ಆಚರಣೆ

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಎರಡು ದಶಕದ ಬಳಿಕ ಉಡುಪಿಯಲ್ಲಿ ಸಮಾನಮನಸ್ಕ ಯುವಕರ ತಂಡವು ಪ್ರಥಮವಾಗಿ ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ್ದು, ಇದೀಗ ವಜ್ರ ಮಹೋತ್ಸವ ಆಚರಿಸುತ್ತಿದೆ. ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ.ವಸಂತ ಭಟ್ ಈ ಕುರಿತಾದ ನೆನಪುಗಳನ್ನು ಹಂಚಿಕೊಳ್ಳುತ್ತ ಹೇಳಿದ್ದಿಷ್ಟು- ‘1967ರ ಸಮಯ. ಗಣಪತಿ ವಿಗ್ರಹ ತಂದು ಕಲ್ಸಂಕದ ಭಾರತ್ ಪ್ರೆಸ್ ಮಹಡಿಯಲ್ಲಿ ಪ್ರಥಮ ಗಣೇಶೋತ್ಸವ ಆಚರಿಸಿದೆವು. 2ನೇ ವರ್ಷ ಗಣೇಶನನ್ನು ಕಲ್ಪನಾ ಟಾಕೀಸ್ ವಠಾರಕ್ಕೆ ಕೊಂಡೊಯ್ದು ಪೂಜಿಸಿದೆವು. ಮುಂದೆ 10ರಿಂದ 12 ವರ್ಷ ವಿವಿಧೆಡೆ ಸಂಚಾರಿ ಗಣೇಶೋತ್ಸವ ನಡೆಯಿತು. 1985ರಲ್ಲಿ ಕಡಿಯಾಳಿ ಕಾತ್ಯಾಯನಿ ಮಂಟಪಕ್ಕೆ ಬಂದ ಗಣೇಶ ಸ್ಥಿರವಾಗಿ ನೆಲೆನಿಂತ. ಈ ಕಾರಣಕ್ಕೆ ಕಡಿಯಾಳಿ ಗಣೇಶೋತ್ಸವ ಎಂಬ ಹೆಸರೂ ಬಂದಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲೂ ಬಹಳ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಿದ್ದೆವು. ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ಮಧ್ವಸರೋವರದಲ್ಲಿ ಜಲಸ್ಥಂಭನ ಮಾಡಲಾಗುತ್ತಿತ್ತು. ಕಳೆದ 20 ವರ್ಷಗಳಿಂದ ಸಾವಿರಾರು ಜನರೊಂದಿಗೆ ತೆರಳಿ ಮಲ್ಪೆ ಸಮುದ್ರ ತೀರದಲ್ಲಿ ಮೂರ್ತಿ ವಿಸರ್ಜಿಸಲಾಗುತ್ತಿದೆ. ಸಮಿತಿಯು ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದು, ತಂದೆ- ತಾಯಿ ಇಲ್ಲದ 25 ಮಕ್ಕಳನ್ನು ದತ್ತು ಸ್ವೀಕರಿಸಿ ವಿದ್ಯಾಭ್ಯಾಸದ ಪೂರ್ತಿ ಖರ್ಚುವೆಚ್ಚವನ್ನು ಭರಿಸಲಾಗುತ್ತಿದೆ. ಆರಂಭದಿಂದಲೂ 5 ದಿನಗಳ ಉತ್ಸವ ನಡೆಯುತ್ತಿದೆ. ಕಡಿಯಾಳಿ ಗಣೇಶೋತ್ಸವ ಸ್ಥಳೀಯರ ಪಾಲಿಗೆ ಧಾರ್ವಿುಕ ಆಚರಣೆಯಷ್ಟೇ ಅಲ್ಲದೆ, ಊರಿನ ಸಾಮಾಜಿಕ, ಸಾಂಸ್ಕೃತಿಕ ಬದುಕಿನ ಭಾಗವಾಗಿದೆ’.

ಸಾಂಸ್ಕೃತಿಕ ವೈಭವ

ಮನೆ-ಮನೆಗೆ ಸೀಮಿತವಾಗಿದ್ದ ಗಣೇಶ ಹಬ್ಬವನ್ನು ಸ್ವಾತಂತ್ರ್ಯ ಸಂಗ್ರಾಮದ ಸಂಘಟನೆಗಾಗಿ ಸಾರ್ವಜನಿಕ ಉತ್ಸವನ್ನಾಗಿಸಿದ ಲೋಕಮಾನ್ಯ ಬಾಲಗಂಗಾಧರ ತಿಲಕರೇ ಖುದ್ದಾಗಿ ಆಗಮಿಸಿ ಗಣೇಶೋತ್ಸವಕ್ಕೆ ಚಾಲನೆ ನೀಡಿದ ಇತಿಹಾಸ ಬೆಳಗಾವಿಗಿದೆ. 1893ರಲ್ಲಿ ಪುಣೆಯಲ್ಲಿ ಮೊದಲ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ತಿಲಕರು, ದೇಶದಲ್ಲೇ ಎರಡನೇ ಗಣೇಶ ಮೂರ್ತಿಯನ್ನು 1905ರಲ್ಲಿ ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಿದ್ದರು. ಇಂತಹ ಇತಿಹಾಸ ಹೊಂದಿರುವ ಬೆಳಗಾವಿಯ ಗಣೇಶೋತ್ಸವ 80ರ ದಶಕದಲ್ಲೇ ಉತ್ತುಂಗಕ್ಕೇರಿದೆ. ಈಗ ಬೆಳಗಾವಿಯ ಸಾರ್ವಜನಿಕ ಗಣೇಶ ವಿಸರ್ಜನೆ ಮೆರವಣಿಗೆಯೇ ಒಂದು ಉತ್ಸವವಾಗುತ್ತದೆ. ಅದ್ದೂರಿತನ ಚಾಲ್ತಿಗೆ ಬಂದಿದ್ದು ಸಹ 80ರ ದಶಕದಲ್ಲೇ ಎನ್ನುವುದು ವಿಶೇಷ. 1984ರಲ್ಲಿ ಬೆಳಗಾವಿಯಲ್ಲಿ ಮಹಾನಗರ ಪಾಲಿಕೆ ಸ್ಥಾಪನೆಯಾಗಿದ್ದರಿಂದ ಹಬ್ಬದ ವೈಭವ ಇಮ್ಮಡಿಗೊಳ್ಳಲು ಪ್ರೋತ್ಸಾಹ ಸಿಕ್ಕಿತು. ಮಂಡಳಿಗಳು 1980ರಿಂದಲೇ ವಿವಿಧ ರೂಪ, ಅವತಾರಗಳಲ್ಲಿರುವ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಪೈಪೋಟಿ ಆರಂಭಿಸಿದವು. ಆಗ ಜಿಲ್ಲೆಯಲ್ಲಿ ಬಸವಣ್ಣೆಪ್ಪ ಬ್ಯಾಂಡ್ ಕಂಪನಿ ಪ್ರಸಿದ್ಧಿ ಪಡೆದಿತ್ತು. ಗಣೇಶ ಆಗಮನ ಹಾಗೂ ವಿಸರ್ಜನೆ ಮೆರವಣಿಗೆಗೆ ಈ ಬ್ಯಾಂಡ್ ಕಾಯ್ದಿರಿಸುವುದಕ್ಕಾಗಿಯೇ ಪೈಪೋಟಿ ಇತ್ತು. ಸಾರ್ವಜನಿಕ ಉತ್ಸವ ಮಂಡಳಿಗಳ ಸಂಖ್ಯೆಯೂ 120ಕ್ಕಿಂತ ಹೆಚ್ಚಾಗಿತ್ತು. ಎಲ್ಲರಿಗೂ ಈ ಪ್ರಸಿದ್ಧ ಬ್ಯಾಂಡ್ ಸಿಗುವುದು ಕಷ್ಟವಾಗಿತ್ತು. ಝೇಂಡಾ ವೃತ್ತ ಹಾಗೂ ರವಿವಾರ ಪೇಟೆ ಗಣೇಶ ಉತ್ಸವ ಮಂಡಳಿಗಳಿಗೆ ಮಾತ್ರವೇ ಈ ಬ್ಯಾಂಡ್ ಸಿಗುತ್ತಿತ್ತು. ಆಗ, ಜನರನ್ನು ಸೆಳೆಯುವುದಕ್ಕಾಗಿಯೇ ಇತರ ಮಂಡಳಿಗಳು ವಿವಿಧ ರೂಪದ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಪ್ರಸಿದ್ಧ ದೇವಸ್ಥಾನಗಳ ತದ್ರೂಪ ಮಂಟಪ, ವಿವಿಧ ದೃಶ್ಯಾವಳಿಗಳ ಪ್ರಸ್ತುತಿಗಳನ್ನು ಆರಂಭಿಸಿದರು. 1990ರ ಬಳಿಕ ಗಲಭೆಗಳು ಶುರುವಾಗಿದ್ದರಿಂದ ಕಪಿಲೇಶ್ವರ ಹೊಂಡಕ್ಕೆ ಪರ್ಯಾಯವಾಗಿ ಜಕ್ಕೇರಿ ಹೊಂಡ ನಿರ್ವಣವಾಯಿತು. ಸೌಹಾರ್ದ, ಶಾಂತಿಯುತ ಗಣೇಶೋತ್ಸವಕ್ಕಾಗಿ 1991ರಲ್ಲಿ ಸಾರ್ವಜನಿಕ ಗಣೇಶ ಉತ್ಸವ ಮಂಡಳಿಗಳ ಮಧ್ಯವರ್ತಿ ಮಹಾಮಂಡಳ ರಚನೆಯಾಯಿತು.

ಎತ್ತಿನ ಗಾಡಿಯಲ್ಲಿ ಮೆರವಣಿಗೆ!

ಶಿವಮೊಗ್ಗದಲ್ಲಿ ಸ್ವಾತಂತ್ರ್ಯೂರ್ವದಿಂದಲೇ ಗಣೇಶೋತ್ಸವ ಆಚರಿಸಲಾಗುತ್ತಿದೆ. ಅದರಲ್ಲಿ ಗಾಂಧಿಬಜಾರ್​ನ ಬಸವೇಶ್ವರ ದೇವಸ್ಥಾನ, ರಾಮಣ್ಣ ಶ್ರೇಷ್ಠಿ ಪಾರ್ಕ್​ನ ನಂತರ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಆಗುತ್ತಿರುವ ಹಿಂದೂ ಸಂಘಟನಾ ಮಹಾಮಂಡಳಿಯ ಹಿಂದೂ ಮಹಾಸಭಾ ಗಣಪ ಪ್ರಮುಖವಾದುದು. 80ರ ದಶಕದಲ್ಲಿ ಎತ್ತಿನ ಗಾಡಿಗಳಲ್ಲಿ ಮೆರವಣಿಗೆ ನಡೆಯುತ್ತಿತ್ತು. 1980ರ ದಶಕದಲ್ಲೂ ಹಿಂದೂ ಮಹಾಸಭಾ ಗಣಪತಿ ಸಹಸ್ರಾರು ಭಕ್ತರನ್ನು ಹೊಂದಿತ್ತು. ಆ ಕಾಲದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹ ಮತ್ತು ಹುಂಡಿಯಲ್ಲಿನ ಕಾಣಿಕೆ ಹಣ ಬಳಸಿಕೊಂಡು ಅದ್ದೂರಿಯಾಗಿ ಗಣೇಶ ಚತುರ್ಥಿ ಆಚರಿಸಲಾಗುತ್ತಿತ್ತು. ಶಿವಮೊಗ್ಗ ಸುಬ್ಬಣ್ಣ, ಚಾಮರಾಜ ಭಾವೆ, ಗಂಟಸಾಲ, ಗೋಪಾಲನಾಥ ಸೇರಿ ಹಲವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಲೋಕಕಲ್ಯಾಣಾರ್ಥ ಅಷ್ಟದ್ರವ್ಯ ಗಣ ಹೋಮ ಆಚರಣೆ ನಡೆಯುತ್ತಿತ್ತು. ರಾತ್ರಿಯೇ ವಿನಾಯಕ ಮೂರ್ತಿಯ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಗುತ್ತಿತ್ತು. 1967ರ ನಂತರ ಬೆಳಗ್ಗೆ ಮೂರ್ತಿಗಳ ವಿಸರ್ಜನೆ ಶುರುವಾಯಿತು.

ಭಕ್ತಿಯೇ ಪ್ರಧಾನ

ಮನೆ-ಮನೆಯಿಂದ 5ರಿಂದ 10 ರೂಪಾಯಿ ದೇಣಿಗೆ ಸಂಗ್ರಹ. ಕುಂಬಾರನ ಮನೆಯಿಂದ ಮಣ್ಣಿನ ಗಣಪನನ್ನು ತಂದು ಪೆಂಡಾಲ್​ನಲ್ಲಿ ಪ್ರತಿಷ್ಠಾಪನೆ, ಮೆರವಣಿಗೆಯಲ್ಲಿ ಧ್ವನಿವರ್ಧಕ ಬಳಸಿ ಹಾಡು ಹಾಕಿ ಕುಣಿದು ಕುಪ್ಪಳಿಸುವುದು, ಐದು ದಿನಗಳವರೆಗೆ ವಿನಾಯಕನಿಗೆ ಶ್ರದ್ಧಾ, ಭಕ್ತಿಯಿಂದ ಪೂಜೆ- ಇವು 1980ರ ದಶಕದಲ್ಲಿ ವಿಜಯಪುರ ನಗರದ ಪ್ರತಿಷ್ಠಿತ ಢೋಬಳೆ ಗಲ್ಲಿಯ ಮರಾಠಾ ಸಮಾಜದ ಶ್ರೀ ಗಜಾನನ ತರುಣ ಮಂಡಳಿ ಆಚರಿಸುತ್ತಿದ್ದ ಗಣೇಶ ಉತ್ಸವದ ಸಿಹಿನೆನಪುಗಳು.
ಇದನ್ನು ಮೆಲುಕು ಹಾಕುತ್ತ ಮಂಡಳಿಯ ಹಿರಿಯ ಸದಸ್ಯ ಅಂಬಾದಾಸ ಚವ್ಹಾಣ (67) ಭಾವುಕರಾದರು. ‘ಹಬ್ಬದ ಹತ್ತು ದಿನ ಮುಂಚೆಯೇ ತಯಾರಿ ಆರಂಭಗೊಳ್ಳುತ್ತಿತ್ತು. ಹಬ್ಬದ ದಿನ ಬೆಳಗ್ಗೆ ಕುಂಬಾರನ ಮನೆಗೆ ಚಕ್ಕಡಿಯಲ್ಲಿ ಸಂಭ್ರಮದಿಂದ ತೆರಳಿ ಮಣ್ಣಿನ ಗಣಪನನ್ನು ಮೆರವಣಿಗೆ ಮೂಲಕ ತಂದು ಪೆಂಡಾಲ್​ನಲ್ಲಿ ಪ್ರತಿಷ್ಠಾಪಿಸುತ್ತಿದ್ದೆವು. ನಿತ್ಯ ಸಂಜೆ ಭಕ್ತಿಗೀತೆ, ಸಂಗೀತ ಸಂಜೆ, ಭಕ್ತಿಪ್ರಧಾನ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತಿತ್ತು. ಓಣಿಯ ಎಲ್ಲ ಜನರು ಸೌಹಾರ್ದದಿಂದ ಸಹಕರಿಸಿ ಭಕ್ತಿಯಿಂದ ಸಂಭ್ರಮಿಸುತ್ತಿದ್ದೆವು’ ಎಂದರು.

ಸಂಗೀತ ಕಛೇರಿಯ ಸ್ವರನಾದ

ಮೈಸೂರಿನ ವಾಣಿ ವಿಲಾಸ ಮೊಹಲ್ಲಾದ (ಒಂಟಿಕೊಪ್ಪಲ್) 8ನೇ ಕ್ರಾಸ್​ನ ಗಣೇಶೋತ್ಸವಕ್ಕೆ ಈಗ 65 ವಷರ್ಗಳ ಸಂಭ್ರಮ. ಸಮಿತಿಯಿಂದ 1962ರಲ್ಲಿ ಆರಂಭಗೊಂಡ ಗಣೇಶೋತ್ಸವ, ಧಾರ್ವಿುಕ ಆಚರಣೆಯಾಗಿ ಮಾತ್ರವಲ್ಲದೆ ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ಉಳಿಸುವ ಕರ್ನಾಟಕದ ಹೆಮ್ಮೆಯ ಐತಿಹಾಸಿಕ ಸಂಗೀತೋತ್ಸವವಾಗಿ ಮನ್ನಣೆ ಪಡೆದಿದೆ. ಆರಂಭದಲ್ಲಿ ಗಣೇಶ ಚತುರ್ಥಿಯನ್ನು ಪೂಜೆಗಾಗಿ ಆರಂಭಿಸಿದ ಬಳಿಕ ಬಡಾವಣೆಯ ನಿವಾಸಿಗಳು ಅದನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಸಂಘಕ್ಕೆ 1985ರಲ್ಲಿ ಟ್ರಸ್ಟ್ ರೂಪ ನೀಡಿ ‘ಶ್ರೀಪ್ರಸನ್ನ ವಿದ್ಯಾ ಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್ (ಎಸ್​ಪಿವಿಜಿಎಂಸಿ’ ಎಂದು ನಾಮಕರಣ ಮಾಡಿದರು. ಪೂಜೆ, ಧಾರ್ವಿುಕ ಆಚರಣೆ ಮಾಡಿಕೊಂಡು ಬರá-ತ್ತಿದ್ದ ಉತ್ಸವಕ್ಕೆ ಟ್ರಸ್ಟ್ ರಚನೆಗೊಂಡ ಬಳಿಕ ಪಾರಂಪರಿಕ ಸಂಗೀತ ಸ್ಪರ್ಶ ನೀಡಲಾಯಿತು. ಆರಂಭಗೊಂಡಾಗಿನಿದ ಇಂದಿನವರೆಗೆ ಮೈಸೂರಿನ ವಿ.ವಿ. ಮೊಹಲ್ಲಾದ 8ನೇ ಕ್ರಾಸ್ ರಸ್ತೆಯಲ್ಲೇ ಈ ಉತ್ಸವ ಒಂದೇ ಸ್ಥಳದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ. 0ರಿಂದ 14 ದಿನಗಳ ಕಾಲ ಮಳೆ ನಿರೋಧಕ ತಾತ್ಕಾಲಿಕ ಸಭಾಂಗಣ ನಿರ್ವಿುಸಿ ಗಣೇಶಪೂಜೆಯೊಂದಿಗೆ ಹಿಂದೂಸ್ತಾನಿ, ಕರ್ನಾಟಕ ಸಂಗೀತದ ಖ್ಯಾತನಾಮ ಕಲಾವಿದರನ್ನು ಕರೆಸಿ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸá-ತ್ತ ಬಂದಿರá-ವುದು ವಿಶೇಷ.
ರಾಗಗಳ ಪುನರಾವರ್ತನೆಗಿಲ್ಲ ಅವಕಾಶ: ಗಣೇಶೋತ್ಸವ ನಡೆಯá-ವ ಪ್ರತಿದಿನ ಸಂಜೆ 6.45ಕ್ಕೆ ಸಂಗೀತ ಕಛೇರಿಗಳು ಆರಂಭವಾಗುತ್ತವೆ. ಈ ಸಂಗೀೋತ್ಸವದ ಮತ್ತೊಂದು ವಿಶೇಷತೆ ಎಂದರೆ ರಾಗಗಳ ಪುನರಾವರ್ತನೆ ಇರುವುದಿಲ್ಲ. ಒಂದೇ ರಾಗವನ್ನು ಬೇರೆ ಬೇರೆ ಕಲಾವಿದರು ಪುನರಾವರ್ತಿಸದಂತೆ ಟ್ರಸ್ಟ್​ನವರು ಮುಂಚಿತವಾಗಿಯೇ ಯೋಜಿಸುತ್ತಾರೆ. ಕಛೇರಿಯಲ್ಲಿ ‘ರಾಗಂ ತಾನಂ ಪಲ್ಲವಿ’ ಆರ್​ಟಿಪಿ ಹಾಡುವುದು ಕಡ್ಡಾಯ. ಜತೆಗೆ ಸಂಗೀತ ಕಛೇರಿಗೂ ಮುನ್ನ ರಾಜ್ಯದ ಪ್ರಸಿದ್ಧ ಕಲಾವಿದರಿಂದ ಗಮಕ ವಾಚನ ಮತ್ತು ವ್ಯಾಖ್ಯಾನಗಳು ನಡೆಯುತ್ತವೆ. ಟ್ರಸ್ಟ್ ಯಶಸ್ವಿಯಾಗಿ 50 ವರ್ಷ ಪೂರೈಸಿದ್ದರ ಅಂಗವಾಗಿ 2012ರಲ್ಲಿ ಸುವರ್ಣ ಮಹೋತ್ಸವನ್ನು ಆಚರಿಸಿಕೊಂಡಿದೆ. ಪ್ರಸಕ್ತ 2026ನೇ ಸಾಲಿನಲ್ಲಿ ಸೆಪ್ಟೆಂಬರ್ 14ರಿಂದ 27ರ ವರೆಗೆ ಈ ಉತ್ಸವ ನಡೆಯಲಿದ್ದು, 65ನೇ ವರ್ಷದ ಐತಿಹಾಸಿಕ ಸಂಗೀತೋತ್ಸವಕ್ಕೆ ಸಾಕ್ಷಿಯಾಗá-ತ್ತಿದೆ. ಪೌರಾಣಿಕ ಕಥೆಗಳಿಗೆ ಜೀವ
ಹುಬ್ಬಳ್ಳಿ ಗಣೇಶೋತ್ಸವ ರಾಜ್ಯಕ್ಕೆ ಹೆಸರುವಾಸಿ. ಅನೇಕ ಗಣೇಶೋತ್ಸವ ಸಮಿತಿಗಳು ಪೌರಾಣಿಕ ಅಷ್ಟೇ ಅಲ್ಲದೆ, ಆಧುನಿಕ ಘಟನಾವಳಿಗಳು, ಕಥೆಗಳನ್ನು 10-15 ನಿಮಿಷಗಳ ಪ್ರದರ್ಶನದ ಮೂಲಕ ಪ್ರಸ್ತುತ ಪಡಿಸುತ್ತ ಬಂದಿವೆ. ಅದರಲ್ಲೂ ಹುಬ್ಬಳ್ಳಿಯ ಸ್ಟೇಶನ್ ರೋಡ್​ನ ‘ಶ್ರೀ ಗಣೇಶ ಉತ್ಸವ ಮಂಡಳಿ’ಯವರು ಕಳೆದ 50 ವರ್ಷಗಳಿಂದ ಇಂತಹ ವಿಶೇಷ ಉತ್ಸವಕ್ಕೆ ಸಾಕ್ಷಿಯಾಗುತ್ತ ಬಂದಿದ್ದಾರೆ. ಅವರ ಕಥಾರೂಪಕವೇ ಪ್ರತಿವರ್ಷವೂ ಭಕ್ತರ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತದೆ.
1986ರಿಂದ ಐತಿಹಾಸಿಕ ಘಟನಾವಳಿಗೆ ಪ್ರದರ್ಶನದ ಮೂಲಕ ಜೀವ ತುಂಬುತ್ತ ಬಂದಿದ್ದಾರೆ. 1986ರಲ್ಲಿ ಮೊದಲ ಬಾರಿ ವೈಕುಂಠದ ಸೃಷ್ಟಿ. ನಂತರದಲ್ಲಿ ಕೈಲಾಸ, ಮಹಾಭಾರತ, ರಾಮಾಯಣ, ಶ್ರೀಸತ್ಯನಾರಾಯಣ, ಶಿವಾಜಿ ಮಹಾರಾಜರ ರಾಯಗಡ ಕೋಟೆ... ಹೀಗೆ ಅನೇಕ ಪೌರಾಣಿಕ, ಐತಿಹಾಸಿಕ ಕಥೆಗಳನ್ನು ಗಣೇಶೋತ್ಸವದಲ್ಲಿ ಭಕ್ತರ ಮುಂದಿಟ್ಟಿದ್ದಾರೆ.

ಇತಿಹಾಸ ಸೃಷ್ಟಿಸಿದ ಮೂರ್ತಿ

ಅದು 1958ರ ಸಮಯ. ಗಣೇಶ ಚತುರ್ಥಿಗಾಗಿ ಚಿತ್ರದುರ್ಗ ನಗರದಲ್ಲಿ ಮೂರ್ತಿ ತಯಾರಿಸುತ್ತಿದ್ದ ಕಲಾಕಾರರು, ವಿಘ್ನವಿನಾಶಕನ ಬಹು ಸುಂದರವಾದ ಮೂರ್ತಿಯೊಂದನ್ನು ಚಿತ್ರದುರ್ಗದ ಆನೆಬಾಗಿಲು ಬಳಿ ಬಿಟ್ಟು ಹೋದರು. ಅನಾಥವಾಗಿ ನಿಂತಿದ್ದ ಆ ಕಲಾಕೃತಿಯೇ ಮುಂದೊಂದು ದಿನ ಇತಿಹಾಸ ಸೃಷ್ಟಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ! ಹೌದು, ಕಲಾಕಾರರು ಬಿಟ್ಟುಹೋದ ಆ ಸುಂದರ ಮೂರ್ತಿಯೇ ಭಕ್ತರ ಪಾಲಿಗೆ ‘ಪ್ರಸನ್ನ ಗಣಪತಿ’ಯಾಗಿ ಕೋಟೆನಾಡಿನ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿ ಬೆಳೆದು ನಿಂತಿದೆ. ಪ್ರಸನ್ನ ಗಣಪತಿಗೆ ಸಾರ್ವಜನಿಕ ಗಣೇಶೋತ್ಸವದ ಸ್ವರೂಪ ಬರಲು ಬಾಲಗಂಗಾಧರ ತಿಲಕ್ ಪ್ರೇರಣೆಯಾದರು. ಭವ್ಯ ಆಚರಣೆಗೆ ಇದು ನಾಂದಿಯಾಯಿತು. ಅಂದಿನಿಂದ 10 ದಿನ ಪ್ರಸಾದ ವಿತರಣೆ ನಂತರ ಲೋಕಕಲ್ಯಾಣಾರ್ಥ ಗಣಹೋಮ ಸೇರಿ ಇನ್ನಿತರೆ ಪೂಜೆಗಳನ್ನು ಈಗಲೂ ನೆರವೇರಿಸಲಾಗುತ್ತಿದೆ.
ತೆಂಗಿನ ಚಪ್ಪರದಿಂದ ದಿಗ್ಗಜರ ಗಾನಸುಧೆವರೆಗೆ: ಆರಂಭದಲ್ಲಿ ತೆಂಗಿನ ಗರಿಗಳಿಂದ ಬೃಹತ್ ಚಪ್ಪರ ನಿರ್ವಿುಸಿ, 10 ದಿನಗಳ ಕಾಲ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಉತ್ಸವ ಪೂಜೆಗಷ್ಟೇ ಸೀಮಿತವಾಗದೆ, ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡುವ ಮೂಲಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವೇದಿಕೆಯಾಯಿತು. ಗಾನ ಸರಸ್ವತಿ ಎಸ್. ಜಾನಕಿ, ಬಾಲಮುರಳಿ ಕೃಷ್ಣ, ಹರಿಕಥೆ ವಿದ್ವಾಂಸರಾದ ಗುರುರಾಜ ನಾಯ್ಡು, ಶೋಭಾ ನಾಯ್ಡು, ಮೈಸೂರು ಮಾಲಿನಿ, ಸಿನಿಮಾ ವಿತರಕ ಚಿಟ್ಟಿ ಬಾಬು ಸೇರಿ ಅನೇಕ ಕಲಾವಿದರು ಕಲಾಸೇವೆಯನ್ನು ಸಮರ್ಪಿಸಿದರು.

ಕಲಾವಿದರಿಗೆ ವೇದಿಕೆ

ಕೆಲ ಉತ್ಸಾಹಿ ತರುಣರು ಮತ್ತು ಕಾಲೇಜು ವಿದ್ಯಾರ್ಥಿಗಳಿಂದ 1982ರಲ್ಲಿ ಪ್ರಾರಂಭವಾದ ಬೆಂಗಳೂರು ಜಯನಗರ 8ನೇ ಬ್ಲಾಕ್​ನ ವಿನಾಯಕ ಮಿತ್ರ ಮಂಡಳಿಯು ಹಿಂದೂ ಸಮಾಜದ ಸಾಂಪ್ರದಾಯಿಕ ಮೌಲ್ಯಗಳ ಪ್ರಚಾರದ ಜತೆಗೆ, ಗಣೇಶೋತ್ಸವಕ್ಕೆ ಜನರನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಧಾರ್ವಿುಕ ಉತ್ಸವದ ನೆಪದಲ್ಲಿ ಮಿತ್ರ ಮಂಡಳಿ ಮಾಡಿದ ಬಹುದೊಡ್ಡ ಕೆಲಸ ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು. ವಿನಾಯಕ ಮಿತ್ರಮಂಡಳಿಯ ವೇದಿಕೆಯಲ್ಲಿ ಘಟಾನುಘಟಿ ಗಾಯಕರು, ಕಲಾವಿದರು ಪಾಲ್ಗೊಂಡ ಇತಿಹಾಸವಿದೆ. ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ, ಕುನ್ನಕುಡಿ ವೈದ್ಯನಾಥನ್, ಕದ್ರಿ ಗೋಪಾಲನಾಥ್, ಸಿ.ಅಶ್ವತ್, ಮಾಸ್ಟರ್ ಹಿರಣ್ಣಯ್ಯ, ಪುತ್ತೂರು ನರಸಿಂಹ ನಾಯಕ್, ಡಾ.ವಿದ್ಯಾಭೂಷಣ, ರತ್ನಮಾಲಾ ಪ್ರಕಾಶ್, ಮಂಜುಳಾ ಗುರುರಾಜ್, ಬಿ.ಕೆ.ಸುಮಿತ್ರಾ, ಬಿ.ಆರ್.ಛಾಯಾ, ರಾಜು ಅನಂತಸ್ವಾಮಿ, ಪ್ರವೀಣ್ ಗೋಡ್ಖಿಂಡಿ, ಎಂ.ಡಿ.ಪಲ್ಲವಿ, ಸಂಗೀತಾ ಕಟ್ಟಿ, ಸುಧಾ ಬರಗೂರು, ದಯಾನಂದ್, ಎಂ.ಎಸ್. ನರಸಿಂಹಮೂರ್ತಿ, ಸರಿಗಮ ವಿಜಿ, ಉಪಾಸನೆ ಸೀತಾರಾಂ, ಮೇಕಪ್ ನಾಣಿ ಮುಂತಾದ ಪ್ರಸಿದ್ಧ ಕಲಾವಿದರು ಕಾರ್ಯಕ್ರಮಗಳನ್ನು ನೀಡಿದ್ದಾರೆ.
1989ರಿಂದ ಪ್ರತಿವರ್ಷ ‘ಗಣಪತಿ ಹೋಮ’ ನಡೆಸಿಕೊಂಡು ಬಂದಿರುವುದು ಒಂದು ಧಾರ್ವಿುಕ ದಾಖಲೆ. ದತ್ತಿ ಕಾಯ್ದೆಯನ್ವಯ ನೋಂದಣಿಯಾಗಿರುವ ಸಂಸ್ಥೆಯು ಅನುದಾನ ರಹಿತ ಶಾಲೆಗಳಿಗೆ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ಶೈಕ್ಷಣಿಕ ಸೇವೆಯಲ್ಲೂ ತೊಡಗಿಸಿಕೊಂಡಿದೆ. ವನಮಹೋತ್ಸವದಂತಹ ಪರಿಸರ ಕಾಳಜಿ, ಉಚಿತ ವೈದ್ಯಕೀಯ ಶಿಬಿರ ಇತ್ಯಾದಿ ಸಾಮಾಜಿಕ ಬದ್ಧತೆಯನ್ನು ಮಂಡಳಿ ಇರಿಸಿಕೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net