ನಿವೃತ್ತರ ಗ್ರಾಚ್ಯುಟಿಗೆ ಕರಗಿತು ಹಾಪ್‌ಕಾಮ್ಸ್ ದುಡಿಮೆ ಬಂಡವಾಳ !

HOPCOMS delegation
Published on

ಬೆಂಗಳೂರು: ಸರ್ಕಾರದಿಂದ 15 ಕೋಟಿ ರೂ. ದುಡಿಮೆ ಬಂಡವಾಳ ನೀಡಿ, ಸುಗಮ ಕಾರ್ಯನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್‌ಕಾಮ್ಸ್) ಮೊರೆಯಿಟ್ಟಿದೆ.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ತಮ್ಮನ್ನು ಭೇಟಿಯಾದ ಹಾಪ್‌ಕಾಮ್ಸ್ ನಿಯೋಗದ ಜತೆಗೆ ಸಭೆ ನಡೆಸಿದ ಸಿಎಂ, ಸಂಘದ ಕಾರ್ಯಚಟುವಟಿಕೆ, ವಹಿವಾಟು ಹಾಗೂ ರೈತರಿಗೆ ಅನುಕೂಲತೆ ಕುರಿತು ಚರ್ಚಿಸಿ ಮಾಹಿತಿ ಪಡೆದರು.

ಇದೇ ಸಂದರ್ಭದಲ್ಲಿ ಹಾಪ್‌ಕಾಮ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ 225 ಸಿಬ್ಬಂದಿ ವಯೋ ನಿವೃತ್ತರಾಗಿದ್ದಾರೆ. ಈ ಪೈಕಿ ಅನೇಕರಿಗೆ ಗ್ರಾಚ್ಯುಟಿ ಮೊತ್ತವನ್ನು ದುಡಿಮೆ ಬಂಡವಾಳದಿಂದ ಭರಿಸಲಾಗಿದೆ.

ಬಹಳಷ್ಟು ನಿವೃತ್ತ ಸಿಬ್ಬಂದಿಗೆ ಗ್ರಾಚ್ಯುಟಿ ಪಾವತಿ ಬಾಕಿಯಿದೆ. ಆದರೂ ತುರ್ತು ಅಗತ್ಯಗಳಿಗಾಗಿ ಈ ಸಿಬ್ಬಂದಿ ಬಯಸಿದಾಗ ಸಾಧ್ಯವಿದ್ದಷ್ಟು ನೆರವು ನೀಡಲಾಗಿದೆ.

ಮಳಿಗೆಗಳ ನವೀಕರಣ ಪ್ರಸ್ತಾಪ

ದುಡಿಮೆ ಬಂಡವಾಳವೂ ಕರಗಿ ಹೋಗಿದೆ. 225 ಮಳಿಗೆಗಳ ನವೀಕರಣದ ಅಗತ್ಯವಿದೆ. ದುಡಿಮೆ ಬಂಡವಾಳ 15 ಕೋಟಿ ರೂ., ಮಳಿಗೆಗಳ ನವೀಕರಣಕ್ಕೆ ಪ್ರತ್ಯೇಕ ಆರ್ಥಿಕ ಸಹಾಯ ನೀಡಬೇಕು ಎಂದು ನಿಯೋಗ ಮನವಿ ಮಾಡಿಕೊಂಡಿತು.

ಹಾಪ್‌ಕಾಮ್ಸ್ ವಾರ್ಷಿಕ 100 ಕೋಟಿ ರೂ.ಗಳ ವಹಿವಾಟು ನಡೆಸುತ್ತಿದೆ. ತರಕಾರಿ, ಹಣ್ಣುಗಳನ್ನು ಬೆಳೆದ ರೈತರಿಗೂ ಅನುಕೂಲವಾಗಿದೆ. ಉತ್ತಮಗುಣಮಟ್ಟದ ಹಣ್ಣು, ತರಕಾರಿಗಳು ಗ್ರಾಹಕರಿಗೆ ಕೈಗೆ ಎಟುಕುವ ಬೆಲೆಯಲ್ಲಿ ದೊರೆಯುತ್ತಿದೆ ಎಂದೂ ವಿವರಿಸಿತು.

ಸಂಘದ ವಹಿವಾಟು, ಆರ್ಥಿಕ ಸ್ಥಿತಿ, ದುಡಿಮೆ ಬಂಡವಾಳ ಹಾಗೂ ಮಳಿಗೆಗಳ ನವೀಕರಣಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ ಸಿಎಂ ಸಿದ್ದರಾಮಯ್ಯ, ಸರ್ಕಾರದಿಂದ ಸಾಧ್ಯವಿರುವ ಸಹಾಯವು ಲಭಿಸಲಿದೆ ಎಂಬ ಭರವಸೆ ನೀಡಿದರು.

ನಿಯೋಗದಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಕೊತ್ತೂರು ಮಂಜುನಾಥ್, ಹಾಪ್‌ಕಾಮ್ಸ್ ಅಧ್ಯಕ್ಷ ಗೋಪಾಲಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿ, ನಿರ್ದೇಶಕ ಮಂಡಳಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net